ಚಿಕ್ಕಮಗಳೂರು: ಸಾಮಾನ್ಯವಾಗಿ ಸಾಗುವಾನಿ ಮರಗಳು ಒಬ್ಬ ವ್ಯಕ್ತಿ ತಬ್ಬಿಕೊಳ್ಳುವಷ್ಟು ದಪ್ಪಕ್ಕೆ ಬೆಳೆಯುತ್ತವೆ. ಆದರೆ, ಭದ್ರಾ ಅಭಯಾರಣ್ಯದಲ್ಲಿ ಐದು ಜನ ತಬ್ಬಿಕೊಳ್ಳುವಷ್ಟು ದಪ್ಪದ ಸಾಗುವಾನಿ ಮರವೊಂದಿದೆ. ಈ ಮರ ಪ್ರಕೃತಿ ವೈಶಿಷ್ಟ್ಯಕ್ಕೆ ಸಾಕ್ಷಿಯಾಗಿದ್ದು, ಪರಿಸರ ಪ್ರೇಮಿಗಳು, ಅಧ್ಯಯನಕಾರರ ಆಕರ್ಷಣೀಯ ಕೇಂದ್ರವೂ ಆಗಿದೆ.
ಭದ್ರಾ ಅರಣ್ಯದಲ್ಲಿರುವ ಈ ಸಾಗುವಾನಿ ಮರದ ಎತ್ತರ ಸರಿ ಸುಮಾರು 100 ಅಡಿಗೂ ಹೆಚ್ಚಿದೆ. ಮರದ ಸುತ್ತಳತೆ 5.45 ಮೀಟರ್, ಒಟ್ಟಿಗೆ ಐದು ಜನರು ತಮ್ಮ ಕೈಹಿಡಿದು ತಬ್ಬುವಷ್ಟು ದಪ್ಪವಿದೆ. ತಜ್ಞರ ಮಾಹಿತಿ ಪ್ರಕಾರ ಈ ಮರದ ಆಯಸ್ಸು ಬರೋಬ್ಬರಿ 300 ವರ್ಷಕ್ಕಿಂತಲೂ ಅಧಿಕ. ದೇಶದ ದಟ್ಟಾರಣ್ಯದಲ್ಲಿ ವಿವಿಧ ಜಾತಿಯ ವಿಶಿಷ್ಟ ಮರಗಳನ್ನು ಕಾಣಬಹುದು. ಆದರೆ, ಇಷ್ಟೊಂದು ದಪ್ಪದ ಸಾಗುವಾನಿ ಮರ ಕಾಣಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ಈ ಸಾಗುವಾನಿ ಮರ, ಭದ್ರಾ ಅಭಯಾರಣ್ಯದ ವಿಶಿಷ್ಟತೆಗಳಲ್ಲಿ ಒಂದಾಗಿದೆ.
ಕರ್ನಾಟಕ ರಾಜ್ಯದಲ್ಲಿಯೇ ಅತ್ಯಂತ ವಿಶೇಷ ಹಾಗೂ ಬೃಹತ್ ಗಾತ್ರದ ಹೆಚ್ಚಿನ ಆಯಸ್ಸು ಕಳೆದಿರುವ ಮರವಾಗಿದೆ ಈ ಸಾಗುವಾನಿ. ಇದು ಭದ್ರಾ ಅಭಯಾರಣ್ಯ ವ್ಯಾಪ್ತಿಯ ಮತ್ತೋಡಿ ಪ್ರದೇಶದಲ್ಲಿದೆ. ಈ ಮರವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಜನರು ಬರುತ್ತಾರೆ. ಅರಣ್ಯದ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಈ ಮರವನ್ನು, ಚಿಕ್ಕಮಗಳೂರು ಅರಣ್ಯ ಇಲಾಖೆ ಕೂಡ ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದೆ. ಮರದ ಸುತ್ತ ಸಿಮೆಂಟ್ನ ಕಟ್ಟೆ ಕಟ್ಟಲಾಗಿದೆ. ಪ್ರತಿನಿತ್ಯ ಮೂರು ನಾಲ್ಕು ಬಾರಿ ಅರಣ್ಯ ಸಿಬ್ಬಂದಿ ಗಸ್ತು ತಿರುಗುವ ಮೂಲಕ ಮರದ ಬಗ್ಗೆ ಎಚ್ಚರ ವಹಿಸುತ್ತಿದ್ದಾರೆ.
ಪ್ರತಿನಿತ್ಯ ಮರದ ಬಳಿ ಹಲವಾರು ಮಂದಿ ಈ ಮರದ ಬಳಿ ಬಂದು ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಾರೆ. ಪ್ರವಾಸಿಗರಿಗೆ ಇತಿಹಾಸ ತಿಳಿಯಲು, ಮರದ ಹೆಸರು ಮತ್ತು ಸಣ್ಣ ಬೋರ್ಡ್ನಲ್ಲಿ ಇತಿಹಾಸವನ್ನು ಬರೆದು ತೂಗು ಹಾಕಲಾಗಿದೆ.