ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಮೂಡಿಗೆರೆ ತಾಲೂಕಿನ ಸುಂಕ ಶಾಲೆಯ ಗ್ರಾಮದಿಂದ ಹೊರ ಬರಲಾರದೇ 15 ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ 15 ಜನರು ಸಿಲುಕ್ಕಿದ್ದು, ನಿನ್ನೆಯಿಂದ ಈ ಗ್ರಾಮದ ಜನರು ಸಂಪರ್ಕ ಕಳೆದುಕೊಂಡಿದ್ದಾರೆ. ಅತಂತ್ರ ಪರಿಸ್ಥಿತಿಯಲ್ಲಿ ಗ್ರಾಮದ ಜನರು ಇದ್ದು, ಸುರಕ್ಷಿತ ಜಾಗಕ್ಕೆ ಕರೆದುಕೊಂಡು ಹೋಗುವಂತೆ ಜಿಲ್ಲಾಡಳಿತದ ಮೊರೆ ಇಡುತ್ತಿದ್ದಾರೆ. ಎನ್.ಆರ್.ಪುರ ತಾಲೂಕಿನ ಕಡಬಗೆರೆ ಪಕ್ಕದಲ್ಲಿರುವ ಮಸಿಗದ್ದೆ ಗ್ರಾಮದಲ್ಲಿ ಮನೆ ಕುಸಿದು ಬಿದ್ದಿದ್ದು, ಮನೆ ಮಾಲೀಕರಾದ ರಾಜಮ್ಮಗೆ ಇರಲು ಸೂರು ಇಲ್ಲದಂತಾಗಿದೆ.
ಇನ್ನು ಮಲೆನಾಡಿನಲ್ಲಿ ನೆರೆಯಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗೆ ಯೋಧರು ಸನ್ನದ್ಧರಾಗಿದ್ದು ಬೆಂಗಳೂರಿನಿಂದ ಒಂದು ಯೋಧರ ತಂಡ ಚಿಕ್ಕಮಗಳೂರು ಜಿಲ್ಲೆಯ ಕಡೆಗೆ ಬರುತ್ತಿದೆ. 34 ಜನರ ತಂಡ ಇದಾಗಿದ್ದು, ಮೂಡಿಗೆರೆ ತಾಲೂಕು ಹಾಗೂ ಎನ್.ಆರ್.ಪುರ ತಾಲೂಕಿಗೆ ಈ ತಂಡ ಹೊರಡಲಿದೆ ಎಂಬ ಮಾಹಿತಿ ದೊರಕಿದೆ. ಇತ್ತ ಲಕ್ಕವಳ್ಳಿಯ ಪಕ್ಕ ಇರುವ ಭದ್ರಾ ಅಣೆಕಟ್ಟಿನಿಂದ ನೀರು ಬಿಡುಗಡೆ ಆಗುತ್ತಿರುವ ಹಿನ್ನೆಲೆ ನದಿ ಪಾತ್ರದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ತರೀಕೆರೆಯ ತಹಶೀಲ್ದಾರ್ ಧರ್ಮೋಜಿರಾವ್ ಮಾಹಿತಿ ನೀಡಿದ್ದಾರೆ.
ತರೀಕೆರೆ ತಾಲೂಕಿನ ಸೋಂಪುರ ಗ್ರಾಮಸ್ಥರಿಗೆ ಮನವಿ ಮಾಡಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ರಂಗೇನಹಳ್ಳಿಯಲ್ಲಿ ಅಂಬಾ ಭವಾನಿ ಕಲ್ಯಾಣ ಮಂಟಪದಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ. ಭದ್ರಾ ಡ್ಯಾಂನ ನಾಲ್ಕು ಗೇಟ್ ತೆರೆಯುವ ಸಾಧ್ಯತೆ ಇದ್ದು, ಈಗಾಗಲೇ ಅಪಾಯದ ಮಟ್ಟ ಮೀರಿ ಭದ್ರಾ ನದಿ ಹರಿಯುತ್ತಿದೆ.