ಚಿಕ್ಕಮಗಳೂರು: ಕೊರೊನಾ ಭೀತಿ ನಡುವೆಯೂ ಸತತ ಮೂರನೇ ದಿನವೂ ಚಿಕ್ಕಮಗಳೂರು ನಗರ ಸೇರಿದಂತೆ, ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಮಳೆಯ ಆರ್ಭಟ ಜೋರಾಗಿದೆ. ಮಳೆಯಿಂದಾಗಿ ಈ ಭಾಗದಲ್ಲಿ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ. ಗಾಳಿ, ಮಳೆಯಿಂದಾಗಿ ವಾಹನಗಳು ನಿಂತಲ್ಲೇ ನಿಂತಿವೆ. ರಸ್ತೆಯ ಮೇಲೆಲ್ಲಾ ನೀರು ತುಂಬಿ ಹರಿಯುತ್ತಿದ್ದು, ಮೂಡಿಗೆರೆಯ ಚೆಕ್ ಪೋಸ್ಟ್ನಲ್ಲಿ ಪೊಲೀಸರು ಹಾಕಿದ್ದ ಶಾಮಿಯಾನ ಗಾಳಿಗೆ ಹಾರಿ ಹೋಗಿದೆ.
ಮಲೆನಾಡು ಭಾಗದಲ್ಲಿ ಕೆಲವೆಡೆ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿವೆ. ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ, ಚಾರ್ಮಾಡಿ, ಜಾವಳಿ, ದುರ್ಗದಹಳ್ಳಿ, ಮೂಡಿಗೆರೆ, ಚಿಕ್ಕಮಗಳೂರು, ಕಡೂರು, ತರೀಕೆರೆ, ಕೊಪ್ಪ ಭಾಗಗಳಲ್ಲಿ ಮೂರನೇ ದಿನವೂ ಮಳೆ ಮುಂದುವರೆದಿದೆ.