ಚಿಕ್ಕಮಗಳೂರು : ಕಾಫಿನಾಡಿನ ಯುವಕನೋರ್ವ ಪೊಲೀಸರ ವಿರುದ್ಧ ಮಾಡಿರುವ ಆರೋಪ ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಠಾಣೆಯಲ್ಲಿ ಪಿಎಸ್ಐ ಇನ್ನಿಲ್ಲದ ಕಿರುಕುಳ ನೀಡಿದ್ದಾರೆ.
ದೂರು ದಾಖಲಾಗದಿದ್ದರೂ ತನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಯುವಕ ದೂರಿದ್ದಾನೆ. ಆದ್ರೆ, ಈ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಯುವಕನ ನಡತೆಯ ಮೇಲೆ ಗ್ರಾಮಸ್ಥರ ಗುಸು ಗುಸು ಮಾತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಯುವಕ ಮಾಡಿರೋ ಆರೋಪ ಒಂದ್ಕಡೆಯಾದ್ರೆ, ಇನ್ನೊಂದೆಡೆ ಈತನ ಕುರಿತು ಕಿರುಗುಂದ ಗ್ರಾಮದಲ್ಲಿ ಬೇರೆ ರೀತಿ ಅಭಿಪ್ರಾಯಗಳು ವ್ಯಕ್ತವಾಗಿವೆ.
22 ವರ್ಷದ ಯುವಕ ಅದೇ ಗ್ರಾಮದ ವಿವಾಹಿತ ಮಹಿಳೆಯ ಹಿಂದೆ ಬಿದ್ದಿದ್ದ ಎಂಬ ಮಾತು ಕೇಳಿ ಬಂದಿವೆ. ಮಹಿಳೆಗೆ ಮದುವೆಯಾಗಿ ಒಂದು ವರ್ಷದ ಮಗುವಿದ್ರೂ ಆಕೆಯ ಹಿಂದೆ ಬಿದ್ದಿದ್ದನಂತೆ. ಈ ಕುರಿತು ಗ್ರಾಮಸ್ಥರೇ ಹಲವು ಬಾರಿ ಬುದ್ಧಿವಾದ ಹೇಳಿದ್ದರಂತೆ.
ಇದೇ ಮಹಿಳೆ ವಿಚಾರದಲ್ಲಿ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಮಹಿಳೆಯ ಪತಿ ಕೆಲ ತಿಂಗಳ ಹಿಂದೆ ದೂರು ಸಹ ನೀಡಿದ್ದರಂತೆ. ಇದೇ ವಿಚಾರವಾಗಿ ಪೊಲೀಸರು ಯುವಕನನ್ನ ಪೊಲೀಸ್ ಠಾಣೆಗೆ ಕರೆಯಿಸಿದ್ದರು ಎನ್ನಲಾಗ್ತಿದೆ.
ಇಷ್ಟೆಲ್ಲಾ ನಡೆದಿದ್ದರೂ ಯುವಕ ಮಾತ್ರ ಹೇಳೋದೆ ಬೇರೆ. ನನ್ನ ವಿರುದ್ಧ ಯಾವುದೇ ಕೇಸ್ಗಳಿಲ್ಲ. ಸುಖಾಸುಮ್ಮನೆ ನನ್ನನ್ನು ಠಾಣೆಗೆ ಕರೆಯಿಸಿ ಚಿತ್ರಹಿಂಸೆ ನೀಡಿದ್ದಾರೆ. ಮೂತ್ರ ಕುಡಿಸಿದ್ದಾರೆ, ಜಾತಿ ನಿಂದನೆ ಮಾಡಿದ್ದಾರೆ ಎಂದೆಲ್ಲಾ ಆರೋಪಿಸಿದ್ದಾನೆ.
ಸದ್ಯ ಈ ಪ್ರಕರಣ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯ ಎಸ್ಐ ಅರ್ಜುನ್ ವಿರುದ್ಧ ಹಲವು ಸೆಕ್ಷನ್ಗಳು ಸೇರಿ ಪರಿಶಿಷ್ಟ ಜಾತಿ ಪರಿಶಿಷ್ಟ-ಪಂಗಡ ದೌರ್ಜನ್ಯ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಠಾಣೆಗೆ ಕರೆದು ದಲಿತ ಯುವಕನಿಗೆ ಮೂತ್ರ ಕುಡಿಸಿದ ಪಿಎಸ್ಐ; ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ