ಚಿಕ್ಕಮಗಳೂರು: ಶಾರದಾಂಬ ದೇವಿಯ ಕ್ಷೇತ್ರವಾಗಿರುವ ಶೃಂಗೇರಿಯಲ್ಲಿ ಕಳೆದ ಒಂದು ವಾರದಿಂದ ಪೌರ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ತಾತ್ಕಾಲಿಕವಾಗಿರುವ ಪೌರ ಕಾರ್ಮಿಕ ಕೆಲಸವನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಪೌರ ಕಾರ್ಮಿಕರ ಪ್ರತಿಭಟನೆ ಜಿಲ್ಲೆಯಲ್ಲಿ 7ನೇ ದಿನಕ್ಕೆ ಕಾಲಿಟ್ಟಿದೆ.
ಶೃಂಗೇರಿ ಪಟ್ಟಣ ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ಕಳೆದ ಒಂದು ವಾರದಿಂದ ಅನಿರ್ದಿಷ್ಟಾವಧಿ ಧರಣಿ ಕುಳಿತು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆ ಶ್ರೀಮಠದ ಗೋಪುರದ ಮುಂಭಾಗ, ಗಾಂಧಿ ಮೈದಾನ, ಬಸ್ ಸ್ಟ್ಯಾಂಡ್ ಸೇರಿದಂತೆ ಪಟ್ಟಣ ಪ್ರಮುಖ ರಸ್ತೆಗಳು ಕಸದ ರಾಶಿಗಳಿಂದ ಕೂಡಿವೆ. ಜನಪ್ರತಿನಿಧಿಗಳು ಭೇಟಿ ನೀಡಿ ತಮ್ಮ ಸಮಸ್ಯೆ ಬಗೆಹರಿಸುವವರೆಗೂ ಯಾರೂ ಸ್ವಚ್ಛ ಕಾರ್ಯ ಮಾಡುವುದಿಲ್ಲ ಎಂಬ ಪಟ್ಟು ಹಿಡಿದಿದ್ದಾರೆ. ಶೃಂಗೇರಿ ಪಟ್ಟಣ ಪಂಚಾಯಿತಿಯಲ್ಲಿ ಸಿ ಆಂಡ್ ಆರ್ ರೂಲ್ ಪ್ರಕಾರ 15 ಜನ ಪೌರ ಕಾರ್ಮಿಕರ ಹುದ್ದೆ ಮಂಜೂರಾಗಿದ್ದು, ಕೇವಲ 02 ಜನ ಖಾಯಂ ನೌಕರರಿದ್ದಾರೆ. ಮಂಜೂರಾತಿ ಹುದ್ದೆ 20 ಇದ್ದು, ಅದರಲ್ಲಿ ನೇರ ಪಾವತಿ 9 ಜನ, ಒಬ್ಬರು ದಿನಗೂಲಿ ಇಬ್ಬರು ಹೊರ ಗುತ್ತಿಗೆ ಕಾರ್ಮಿಕರಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಅಧಿಕಾರಿಗಳು ಕೇವಲ ಹುಸಿ ಭರವಸೆ ನೀಡುತ್ತಿದ್ದಾರೆ. ಆದರೆ ಕಾರ್ಮಿಕರ ಕೆಲಸ ಖಾಯಂಗೊಳಿಸುವ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಪೌರ ಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಸರ್ವರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಪೌರ ಕಾರ್ಮಿಕರು ಪೊರಕೆ ಹಿಡಿದು ಬೀದಿಗೆ ಬಂದು ಕಸ ಗುಡಿಸುತ್ತಾರೆ. ಹಬ್ಬಗಳಿಗೂ ರಜೆ ಪಡೆಯದೆ ಪಟ್ಟಣವನ್ನು ಸ್ವಚ್ಛಗೊಳಿಸುತ್ತಾರೆ. ಶ್ರಮ ವಹಿಸಿ ಇಂತಹ ಉತ್ತಮ ಕಾರ್ಯ ನಿರ್ವಹಣೆ ಮಾಡುತ್ತಿರುವ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಸಾರ್ವಜನಿಕರು ಕೂಡ ಆಗ್ರಹಿಸಿದ್ದಾರೆ.
ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿಗೆ ಈ ಹಿಂದೆಯೂ ಕೂಡ ಒತ್ತಾಯಿಸಿದ್ದರು. ಆದರೆ ಪೌರಕಾರ್ಮಿಕರ ಬೇಡಿಕೆ ಈಡೇರದೆ ಹೋದ ಕಾರಣ ಇದೀಗ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಶಾಸಕರು, ಸಚಿವರ ಮುಂದೆ ಪೌರಕಾರ್ಮಿಕ ಸಮಸ್ಯೆಯನ್ನು ಪ್ರಸ್ತಾಪಿಸಿ ಪರಿಹರಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸರಬರಾಜು ನಿಲ್ಲಿಸುತ್ತೇವೆ. ಅಲ್ಲದೆ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ಮಾಡುತ್ತೇವೆ ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣ ಸೊಸೈಟಿ ಗ್ರಾಹಕರು-ಛಲವಾದಿ ಮಹಾಸಭಾ ಪ್ರತಿಭಟನೆ : ಸಮಸ್ಯೆ ಆಲಿಸಿದ ಸಚಿವರು