ಚಿಕ್ಕಮಗಳೂರು: ರಷ್ಯಾದಲ್ಲಿ ಉಡಾವಣೆ ಆಗಬೇಕಿದ್ದ ಉಪಗ್ರಹ ಈಗ ನಮ್ಮ ಭೂಮಿಯಲ್ಲೇ ಉಡಾವಣೆಯಾಗಲು ಸಜ್ಜಾಗಿದೆ. ಅದಕ್ಕಾಗಿ ಈಗಾಗಲೇ ಪ್ರಧಾನಿ ಮೋದಿಯವರೊಂದಿಗೆ ಕಾಫಿನಾಡಿನ ಯುವಕ ಎರಡು ಬಾರಿ ವಿಸ್ತೃತವಾಗಿ ಮಾತನಾಡಿದ್ದಾರೆ. ನಾಸಾದಲ್ಲಿ (NASA) ಸಿಕ್ಕ ಕೆಲಸ ತ್ಯಜಿಸಿರುವ ಕನ್ನಡಿಗ ಅವೇಜ್ ಅಹಮದ್ ದೇಶದ ಮೊದಲ ಖಾಸಗಿ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಮೂಲತಃ ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ಮಧ್ಯಮ ವರ್ಗದ 23 ವರ್ಷದ ಅವೇಜ್ ಅಹಮದ್ ಇಂದು ವಿಶ್ವದ ಗಮನ ಸೆಳೆದಿದ್ದಾರೆ. ತಂದೆ ನದೀಮ್ ಅಹಮದ್ ಮೆಡಿಕಲ್ ಸ್ಟೋರ್ ಇಟ್ಟುಕೊಂಡಿದ್ದಾರೆ. ಬಿಟ್ಸ್ ಪಲನಿ ಯೂನಿವರ್ಸಿಟಿಯಲ್ಲಿ ಓದಿರುವ ಅವೇಜ್ ಇಂದು ಏರೋಸ್ಪೇಸ್ ಪಿಕ್ಸೆಲ್ ಎಂಬ ಸ್ವಂತ ಕಂಪನಿ ತೆರೆದಿದ್ದಾರೆ. ಅದುವೇ ಉಪಗ್ರಹಗಳ ತಯಾರಿಕಾ ಕಂಪನಿ.
ಕೇಂದ್ರ ಸರ್ಕಾರದ ಬೆಂಬಲ:
ಅವೇಜ್‌ಗೆ ತಾನು ತಯಾರಿಸಿರುವ ಉಪಗ್ರಹಗಳನ್ನು ಇಸ್ರೋದಿಂದ ಉಡಾವಣೆ ಮಾಡಬೇಕೆಂಬ ಆಸೆ ಇತ್ತಂತೆ. ಈ ನಿಟ್ಟಿನಲ್ಲಿ ರಷ್ಯಾದಿಂದ ಉಡಾವಣೆಗೆ ಎಲ್ಲ ಸಿದ್ಧತೆ ನಡೆದಿತ್ತು. ಈ ವಿಚಾರ ಕೇಂದ್ರ ಸರ್ಕಾರಕ್ಕೆ ಗೊತ್ತಾಗಿ ಕೇಂದ್ರ ಸರ್ಕಾರವೇ ಮುಂದೆ ನಿಂತು ಇಂದು ಉಪಗ್ರಹ ಉಡಾವಣೆಗೆ ಸಾಥ್ ಕೊಟ್ಟಿದೆ. ಈ ಖಾಸಗಿ ಉಪಗ್ರಹ ಕಳೆದ ವರ್ಷವೇ ಉಡಾವಣೆ ಆಗಬೇಕಿತ್ತು. ಆದ್ರೆ, ಕೊರೊನಾ ಎಲ್ಲದಕ್ಕೂ ಕಡಿವಾಣ ಹಾಕಿದ್ದರಿಂದ ಮುಂದಿನ ಡಿಸೆಂಬರ್ ತಿಂಗಳೊಳಗೆ ದೇಶದ ಮೊದಲ ಖಾಸಗಿ ಉಪಗ್ರಹ ಮುಗಿಲಿನತ್ತ ಪಯಣ ಬೆಳೆಸಲಿದೆ.
2020ರ ಡಿಸೆಂಬರ್ 14 ರಂದೇ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಹಾಗೂ ಖಾಸಗಿ ಕಂಪನಿಗಳ ಸಿಇಓಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಆಗ ಅವೇಜ್ ಅಹಮದ್ ಮೋದಿ ಜೊತೆ ಮಾತುಕತೆ ನಡೆಸಿದ್ದರು. ಆಗ ಮೋದಿ ಕೇಂದ್ರ ಸರ್ಕಾರದಿಂದ ಎಲ್ಲಾ ಬೆಂಬಲ ನೀಡುವ ಭರವಸೆ ನೀಡಿದ್ದರು.
ಅವೇಜ್ ಅಹಮದ್ ಅವರ ಸಂಶೋಧನೆಯ ಉಪಗ್ರಹ ಬೇರೆಲ್ಲಕ್ಕಿಂತ ಶೇಕಡ 50ಕ್ಕೂ ಹೆಚ್ಚು ಡೇಟಾವನ್ನು ಬಿಡುಗಡೆಗೊಳಿಸುತ್ತದೆ. ಈ ಉಪಗ್ರಹ ಭೂಮಿಯ ಚಲನವಲನದ ಫೋಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತದೆ.
ಇದನ್ನೂ ಓದಿ: ಬೆಳಗಾವಿ: ದೇಗುಲ ಜಾಗದ ವಿಚಾರವಾಗಿ ಎರಡು ಕೋಮುಗಳ ಘರ್ಷಣೆ; ನಾಲ್ವರು ಗಂಭೀರ
ವಿದೇಶದಲ್ಲಿ ಸಿಕ್ಕ ಕೆಲಸ ತ್ಯಜಿಸಿ ಬೆಂಗಳೂರಲ್ಲಿ ಕಂಪನಿ ತೆರೆದು ಇಂದು ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಎರಡರಿಂದ ಮೂರು ವರ್ಷದಲ್ಲಿ ಸುಮಾರು 30ಕ್ಕೂ ಹೆಚ್ಚು ಖಾಸಗಿ ಉಪಗ್ರಹಗಳು ಉಡಾವಣೆಗೊಳ್ಳಲಿದೆಯಂತೆ.