ಚಿಕ್ಕಮಗಳೂರು: ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡ್ತೇವೆ ಎಂಬ ಶಾಸಕ ತನ್ವೀರ್ ಸೇಠ್ ಹೇಳಿಕೆ ಖಂಡನೀಯ. ಇಸ್ಲಾಂನಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ. ಮುಸ್ಲಿಂ ಸಮುದಾಯದವರೇ ಅದನ್ನು ಒಪ್ಪುವುದಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಇಸ್ಲಾಂನಲ್ಲಿ ಮೂರ್ತಿ ಪೂಜೆ ಇಲ್ಲ ಅಂತ ಮುಸ್ಲಿಮರು ಒಪ್ಪಿಕೊಳ್ಳಬೇಕು. ಜೊತೆಗೆ ನಮ್ಮ ದೇವಸ್ಥಾನಗಳನ್ನು ಬಿಟ್ಟುಕೊಡಬೇಕು. ಮೈಸೂರು ನಮ್ಮ ಸ್ವಾಭಿಮಾನದ ಸಾಂಸ್ಕೃತಿಕ ಕೇಂದ್ರ. ಮೈಸೂರಿನ ಮಹಾರಾಣಿಯನ್ನು ಬಂಧಿಸಿ, ಮೋಸದಿಂದ ರಾಜ್ಯಭಾರ ಮಾಡಿದ ವ್ಯಕ್ತಿ ಆತ. ಅವನ ಮೂರ್ತಿಯನ್ನು ನೂರು ಅಲ್ಲ, ಒಂದಿಂಚೂ ಜಾಗದಲ್ಲೂ ನಿರ್ಮಾಣ ಮಾಡುವುದಕ್ಕೆ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: 100 ಅಡಿ ಎತ್ತರದ ಟಿಪ್ಪು ಪ್ರತಿಮೆ ಸ್ಥಾಪನೆಗೆ ಚಿಂತನೆ: ಶಾಸಕ ತನ್ವೀರ್ ಸೇಠ್
ಟಿಪ್ಪು ಸುಲ್ತಾನ್‍ನ 100 ಅಡಿ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಅನ್ನೋದು ದೂರ್ತತನ ಮತ್ತು ಸೊಕ್ಕಿನ ಮಾತು. ಇವೆಲ್ಲಾ ನಡೆಯೋದಿಲ್ಲ. ಜ್ಞಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಮೂರ್ತಿ ಪತ್ತೆಯಾಗಿದ್ದು, ಅದನ್ನು ನಮಗೆ ಬಿಟ್ಟುಕೊಡಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಮಳಲಿಯಲ್ಲೂ ದೇವಸ್ಥಾನದ ಸ್ವರೂಪ ಸಿಕ್ಕಿದೆ. ಅದನ್ನೂ ಬಿಡಬೇಕು. ಶ್ರೀರಂಗಪಟ್ಟಣದ ಹನುಮನ ಮಂದಿರ ಇಂದು ಮದರಸ ಆಗಿದೆ, ಅದನ್ನೂ ಬಿಟ್ಟು ಕೊಡಬೇಕು. ಇಲ್ಲ ಅಂದ್ರೆ ತನ್ವೀರ್ ಸೇಠ್ ವಿರುದ್ಧ ಬಹಿಷ್ಕಾರ ಹಾಕಬೇಕು ಎಂದರು.