ಚಿಕ್ಕಮಗಳೂರು : ಅದು ಬಡ ಕುಟುಂಬ, ನಿತ್ಯ ಕೂಲಿ ಮಾಡಿದ್ರೇ ಮಾತ್ರ ಅವರ ಹೊಟ್ಟೆ ತುಂಬುತ್ತಿತ್ತು. ಕಾಫಿ ತೋಟದಲ್ಲಿ ಆ ಕುಟುಂಬ ಕೆಲ ವರ್ಷಗಳಿಂದ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಆದರೆ, ಬಡ ಕುಟುಂಬದ ಹೆಣ್ಣು ಮಗಳ ಮೇಲೆ ಕಣ್ಹಾಕಿದ ತೋಟದ ಮಾಲೀಕ ಮಾಡಿದ್ದು ಮಾತ್ರ ಮಾನಗೇಡಿ ಕೆಲಸ..
ಓದಿ: ಕುಮಾರ್ ಬಂಗಾರಪ್ಪ ಭೇಟಿ ಮಾಡಿದ ಫಿಲ್ಮ್ ಚೇಂಬರ್ ನಿಯೋಗ
ತೋಟದ ಕೆಲಸ ಮಾಡುತ್ತಿದ್ದ ಯುವತಿಯನ್ನ ಮನೆ ಕೆಲಸಕ್ಕೆಂದು ಕರೆತಂದು ಯುವತಿ ಕೈಗೆ ಮಗು ಕೊಟ್ಟು ಮಾಲೀಕ ನಾಪತ್ತೆಯಾಗಿದ್ದಾನೆ. 2 ವಾರದ ಹಸುಗೂಸನ್ನ ಕೈಯಲ್ಲಿಟ್ಟಿಕೊಂಡು ನೊಂದ ಹುಡುಗಿ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾಳೆ.
ಯುವತಿ ಪೋಷಕರು ಮಲ್ಲೇಶ್ ಗೌಡ ಎಂಬುವರ ತೋಟದಲ್ಲಿ ಕೆಲ ವರ್ಷಗಳಿಂದ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ತೋಟದ ಮಾಲೀಕ ಅನಿತಾಳನ್ನು ಮನೆ ಕೆಲಸಕ್ಕೆಂದು ಕರೆದು ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನಂತೆ.
ನಂತರ ಯುವತಿ ಗರ್ಭ ಧರಿಸಿದ್ದು, ಯಾರಿಗಾದ್ರೂ ಹೇಳಿದ್ರೇ ಶೂಟ್ ಮಾಡಿ ಸಾಯಿಸುತ್ತೇನೆ ಎಂದು ಬೆದರಿಸಿದ್ದರಿಂದ ಯುವತಿ ಎಲ್ಲಾ ವಿಷಯವನ್ನ ಮುಚ್ಚಿಟ್ಟಿದ್ದಾಳೆ.
ಕೊನೆಗೆ ಹೊಟ್ಟೆ ನೋವು ಬಂದಾಗ ಎಲ್ಲವೂ ಬಯಲಾಗಿದೆ. ಆಸ್ಪತ್ರೆಗೆ ತೋರಿಸಲು ಬಂದಾಗ ಮಗುವನ್ನ ಸಿಜೇರಿಯನ್ ಮಾಡಿ ತೆಗೆಯಬೇಕು ಎಂದು ವೈದ್ಯರು ಹೇಳಿದ್ದು, ಯುವತಿಗೆ ಗಂಡು ಮಗುವಾಗಿದೆ. ಮಲ್ಲಂದೂರು ಪೊಲೀಸರು ಆರೋಪಿ ಮಲ್ಲೇಶ್ ಗೌಡ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಕಳೆದ 11 ವರ್ಷದಿಂದ ಅವರ ತೋಟದಲ್ಲೇ ನಾವು ಕೆಲಸ ಮಾಡುತ್ತಿದ್ದೆವು. ಈಗ ಕೆಲಸ ಬಿಟ್ಟು ಎರಡು ವರ್ಷಗಳಾಗಿವೆ. ಆಗಾಗ ಬಂದು ಮನೆ ಕ್ಲೀನ್ ಮಾಡಬೇಕು ಎಂದು ಮಲ್ಲೇಶ್ ಗೌಡನೇ ಈಕೆಯನ್ನ ಜೀಪಲ್ಲಿ ಕರೆದೊಯ್ದು ಇಂದು ಈ ಸ್ಥಿತಿಗೆ ತಂದಿದ್ದಾನೆ. ಮಗಳ ಸ್ಥಿತಿ ಕಂಡು ಹೆತ್ತವರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ.
ಯಾವಾಗ ಮಲ್ಲಂದೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಯಿತೋ ಆರೋಪಿ ಮಲ್ಲೇಶ್ ಗೌಡ ಪರಾರಿಯಾಗಿದ್ದಾನೆ. ಇತ್ತ ಕೈಯಲ್ಲಿ ಎರಡು ವಾರದ ಹಸುಗೂಸನ್ನ ಹಿಡಿದುಕೊಂಡು ಯುವತಿ ನ್ಯಾಯಕ್ಕಾಗಿ ಅಲೆಯುತ್ತಿದ್ದಾಳೆ.
ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಘಟನೆಯಿಂದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಅಮಾಯಕ ಹುಡುಗಿಯರ ಮುಗ್ಧತೆ ಬಂಡವಾಳವಾಗಿಸಿಕೊಂಡು ಸಮಾಜದ ಮುಂದೆ ಬೆತ್ತಲಾದವರ ಬಂಧನ ಆದಷ್ಟು ಬೇಗ ಆಗಬೇಕಿದೆ.