ಚಿಕ್ಕಮಗಳೂರು: ಜಿಲ್ಲಾದ್ಯಂತ ಮಳೆ ಆರ್ಭಟಿಸುತ್ತಿದ್ದು, ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಆ. 11ರವರೆಗೂ ಇದೇ ರೀತಿಯ ಮಳೆ ಮುಂದುವರೆಯುವ ಸಾಧ್ಯತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.
ಆ. 1ರಿಂದ 9 ರವರೆಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆಗಿರುವ ಪ್ರಮಾಣ.
1. ಚಿಕ್ಕಮಗಳೂರು - 326.2 ಮೀ.ಮೀ
2.ಕಡೂರು -126.2 ಮೀ.ಮೀ
3. ಕೊಪ್ಪ - 693.4 ಮೀ. ಮೀ
4. ಮೂಡಿಗೆರೆ - 844.8 ಮೀ.ಮೀ
5. ಎನ್.ಆರ್ ಪುರ - 442.9 ಮೀ ಮೀ
6. ಶೃಂಗೇರಿ - 796.6 ಮೀ.ಮೀ
7. ತರೀಕೆರೆ - 275.9 ಮೀ ಮೀ
ಮೂಡಿಗೆರೆ ತಾಲೂಕು ಚಾರ್ಮಾಡಿ ಘಾಟಿ ರಸ್ತೆ, ಹಳುವಳ್ಳಿ- ಹೊರನಾಡು ರಸ್ತೆ, ಸುಂಕಸಾಲೆ, ದುರ್ಗದಹಳ್ಳಿ, ಕೊಟ್ಟಿಗೆಹಾರ - ಕಳಸ ರಸ್ತೆ, ತತ್ಕೋಳ - ಕುಂದೂರು, ಚನ್ನಹಡ್ಲು - ಹಿರೇಭೈಲು - ಮಲ್ಲೇಶನ ಗುಡ್ಡ ರಸ್ತೆಗಳಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಈ ಕುರಿತು ಯಾವುದೇ ರೀತಿಯ ತೊಂದರೆ ಆಗದಂತೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುತ್ತಿದೆ.
ಭೂ ಕುಸಿತದಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದು, ಎನ್ಡಿಆರ್ಎಫ್ ಸಹಾಯವನ್ನು ಕೋರಲಾಗಿದೆ. ಈಗಾಗಲೇ ಈ ಕುರಿತು ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿದ್ದು, ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಕಾಯುತ್ತಿದೆ. ಯಾವುದೇ ರೀತಿಯ ಸಮಸ್ಯೆಗಳು ಉದ್ಭವವಾದಲ್ಲಿ ಸಾರ್ವಜನಿಕರು ಮಾಹಿತಿ ನೀಡಲು ದಿನದ 24 ಗಂಟೆ ಕಾಲ ಕಾರ್ಯನಿರ್ವಹಿಸುವಂತೆ ಜಿಲ್ಲಾ ಕೇಂದ್ರ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ.
ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನೆರೆಪೀಡಿತ ಪ್ರದೇಶಗಳಲ್ಲಿ ಎಲ್ಲಾ ರೀತಿಯ ರಕ್ಷಣಾ ದೋಣಿಗಳು, ಲೈಫ್ ಜಾಕೇಟ್, ಪ್ರಥಮ ಚಿಕಿತ್ಸೆ ಕಿಟ್, ಇತ್ಯಾದಿ ಸಲಕರಣೆಗಳನ್ನು ಸಂಗ್ರಹಿಸಲಾಗಿದ್ದು, ರಕ್ಷಣಾ ಇಲಾಖೆಗಳಾದ ಅಗ್ನಿಶಾಮಕ ದಳ, ಪೊಲೀಸ್ ಗೃಹ ರಕ್ಷಕ ದಳ ಸಿಬ್ಬಂದಿ ಮೂಲಕ ರಕ್ಷಣಾ ಕಾರ್ಯ ಮಾಡಿಸಲಾಗುತ್ತಿದೆ.
ಮೂಡಿಗೆರೆ - ಚಾರ್ಮಾಡಿ ಘಾಟ್ ಮೂಲಕ ಮಂಗಳೂರು- ಧರ್ಮಸ್ಥಳ ಕಡೆಗೆ ಸಂಚಾರ ಮಾಡುವ ರಸ್ತೆಯಲ್ಲಿ ನಿರಂತರ ಧರೆ ಕುಸಿಯುತ್ತಿದ್ದು, ಸಂಪರ್ಕಕ್ಕೆ ತೊಂದರೆ ಆಗುವ ಕಾರಣ ಚಾರ್ಮಾಡಿ ಘಾಟಿಯಲ್ಲಿ ವಾಹನಗಳ ಸಂಚಾರವನ್ನು 14 ರವರೆಗೂ ನಿಷೇಧ ಮಾಡಲಾಗಿದೆ.
ಹಾಗೆಯೇ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನ ಗಿರಿ, ಬಾಬಾ ಬುಡನ್ ಗಿರಿ, ಮಾಣಿಕ್ಯಧಾರ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಕಾರಣ ಈ ಸ್ಥಳಗಳಲ್ಲಿ ಭೂಮಿ ಕುಸಿಯುತ್ತಿರುವುದರಿಂದ ಪ್ರವಾಸಿಗರು ಈ ಜಾಗಗಳಿಗೆ ಬರದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಪರಿಹಾರ ಕೇಂದ್ರಗಳ ಸ್ಥಾಪನೆ:
ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿರುವ ಮೋರಾರ್ಜಿ ಶಾಲೆ, ಕೊಟ್ಟಿಗೆಹಾರದಲ್ಲಿ 150 ಜನ ಸಂತ್ರಸ್ತರು, ಕಳಸದ ಗಣಪತಿ ಸಮುದಾಯ ಭವನ -ಹೀರೇಬೈಲು - 40 ಜನ, ಸರ್ಕಾರಿ ಪ್ರಾಥಮಿಕ ಶಾಲೆ, ಹಿರೈಬೈಲು- 50 ಜನರು, ಗೋಣಿಬೀಡು ಮೆಟ್ರಿಕ್ ಪೂರ್ವ ವಸತಿ ನಿಲಯ - 35 ಜನ, ಬಾಳೆಹೊನ್ನೂರಿನ ಚರ್ಚ್ ಹಾಲ್-50 ಜನ, ಸರ್ಕಾರಿ ಪ್ರೌಡಶಾಲೆ ಬಾಳೆಹೊನ್ನೂರು -40 ಜನ ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಂಡಿದ್ದಾರೆ.