ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿರುವ ದತ್ತ ಜಯಂತಿಗೆ ವಿಪಕ್ಷ ನಾಯಕ ಆರ್. ಅಶೋಕ್ ಆಗಮಿಸಿ ದತ್ತ ಮಾಲಾಧಾರಣೆ ಮಾಡಿದರು. ಅಶೋಕ್ ಮೊದಲ ಬಾರಿಗೆ ಮಾಲಾಧಾರಣೆ ಮಾಡಿದ್ದು, ಚಿಕ್ಕಮಗಳೂರು ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಸ್ವೀಕಾರ ಮಾಡಿದರು. ಮಾಲಾಧಾರಣೆ ಬಳಿಕ ದೇವಸ್ಥಾನದಲ್ಲಿ ಆರ್.ಅಶೋಕ್ ಹಾಗೂ ಸಿ.ಟಿ. ರವಿ ಭಜನೆ ಮಾಡಿದರು. ಇಂದು ಮಾಲಾಧಾರಿಯಾಗಿ ದತ್ತಪೀಠಕ್ಕೆ ತೆರಳಲಿದ್ದಾರೆ.
ಬಳಿಕ ಮಧ್ಯಾಹ್ನ ಸಾವಿರಾರು ಜನರ ಬೃಹತ್ ಶೋಭಾಯಾತ್ರೆಯಲ್ಲಿ ಭಾಗಿ ಆಗಲಿದ್ದು, ಇವರಿಗೆ ಉಡುಪಿಯ ಪ್ರಮೋದ್ ಮಧ್ವರಾಜ್ ಸಾಥ್ ನೀಡಲಿದ್ದಾರೆ. ಜತೆಗೆ ಅಶೋಕ್ ಸಾವಿರಾರು ಜನರ ಜೊತೆ ಹೆಜ್ಜೆ ಹಾಕುವುದರ ಮೂಲಕ ಶೋಭಾ ಯಾತ್ರೆಗೆ ಹೊಸ ಮೆರುಗು ನೀಡಲಿದ್ದಾರೆ.
ಇನ್ನು ಭಾನುವಾರ ದತ್ತಮಾಲಾ ಧಾರಣೆ ಮಾಡಿದ ಬಳಿಕ ವಿಪಕ್ಷ ನಾಯಕ ಮಾತನಾನಾಡಿದರು. '24 ಗಂಟೆಗಳ ಕಾಲ ದತ್ತ ಮಾಲಾ ಧಾರಣೆ ಮಾಡಿದ್ದೇನೆ. ಈ ಹಿಂದೆ ಕಂದಾಯ ಸಚಿವನಾಗಿದ್ದಾಗ ದತ್ತ ಪೀಠಕ್ಕೆ ಭೇಟಿ ನೀಡಿದ್ದೆ. ಅಯೋಧ್ಯೆ, ಮಥುರಾ, ಕಾಶಿ, ರೀತಿಯ ದತ್ತಪೀಠ ಪೂಜ್ಯ ಪೀಠಕ್ಕೆ ನಮ್ಮ ಸರ್ಕಾರವಿದ್ದಾಗ ಅರ್ಚಕರ ನೇಮಕ ಮಾಡಿದ್ದೇವೆ. ಅಯೋಧ್ಯೆ, ಕಾಶಿ, ಅದೇ ರೀತಿ ನಮಗೆ ದತ್ತಪೀಠ ಪವಿತ್ರ ಸ್ಥಳ. ನಮ್ಮ ಭಾವನೆ ಮಟ್ಟ ಹಾಕುವ ಕೆಲಸ ಕೆಲ ಹಿತಾಸಕ್ತಿಗಳು ಮಾಡುತ್ತಿವೆ. ದಾಖಲೆಗಳಲ್ಲಿ ದತ್ತ ಪೀಠವೇ ಬೇರೆ, ದರ್ಗಾವೇ ಬೇರೆ ಎಂದು ಸ್ಪಷ್ಟಪಡಿಸಿವೆ. ಕೂಡಲೇ ಇಲ್ಲಿನ ಸಮಸ್ಯೆ ಬಗೆ ಹರಿಯಬೇಕು. ನಾನು ವಿರೋಧ ಪಕ್ಷದ ನಾಯಕನಾಗಿ ಈ ಸ್ಥಾನಕ್ಕೆ ಬಂದಿದ್ದೇನೆ. ಇದು ಹಿಂದುಸ್ತಾನ. ಹಿಂದುಸ್ತಾನವಾಗಿಯೇ ಉಳಿಯಬೇಕು ಎಂದಿದ್ದರು.
ಈ ದತ್ತ ಪೀಠದ ಗೌರವ, ಸ್ಥಾನ ಈ ಸರ್ಕಾರ ಎತ್ತಿ ಹಿಡಿಯಬೇಕು. ನಾಳೆ(ಇಂದು) ಅಥವಾ ನಾಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದತ್ತ ಪೀಠಕ್ಕೆ ಬರುತ್ತಾರೆ. ದತ್ತ ಪೀಠದಲ್ಲಿ ನಾನು ಹೋಮ ಇಟ್ಟು ಕೊಂಡಿದ್ದೇನೆ. ಹೋಮದ ಪೂರ್ಣಾವತಿ ಕಾರ್ಯ ಕ್ರಮದಲ್ಲಿ ನಾನು ಭಾಗವಹಿಸುತ್ತೇನೆ. ಮಾಲೆ ಹಾಕುವುದರ ಬಗ್ಗೆ ನನಗೆ ಯಾವುದೇ ಅಂಜಿಕೆ ಇಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ ಎಂದು ಆರ್ ಅಶೋಕ್ ಹೇಳಿದ್ದರು.
ಇನ್ನು ಮೊನ್ನೆ ಶನಿವಾರ ಆಲ್ದೂರಿನಲ್ಲಿ ನಡೆದ ದತ್ತ ಜಯಂತಿ ಶೋಭಾ ಯಾತ್ರೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಚಿವ ಸಿ.ಟಿ ರವಿ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ದರು. ಕೈಯಲ್ಲಿ ಕೇಸರಿ ಧ್ವಜ ಹಿಡಿದು ಶೋಭಾ ಕರಂದ್ಲಾಜೆ ಅವರು ಡಿಜೆ ಹಾಡಿಗೆ ಹೆಜ್ಜೆಹಾಕಿದ್ದು, ಸಿ.ಟಿ ರವಿ ಕೂಡ ಜೊತೆಗಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ಉತ್ಸವ; ಸಂಕೀರ್ತನಾ ಯಾತ್ರೆಯಲ್ಲಿ ಮಹಿಳೆಯರು ಭಾಗಿ