ಚಿಕ್ಕಮಗಳೂರು: ಲಾರಿಯೊಂದು ಬೈಕ್ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಪಟ್ಟಣದಲ್ಲಿ ಮಂಗಳವಾರ ತಡರಾತ್ರಿ ನಡೆಯಿತು. ಮೃತ ವ್ಯಕ್ತಿಯನ್ನು ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಮಂಜುನಾಥ್ (35) ಎಂದು ಗುರುತಿಸಲಾಗಿದೆ.
ಮಂಜುನಾಥ್ ತನ್ನ ತಂದೆ ರಾಮು ಅವರೊಂದಿಗೆ ಬೈಕಿನಲ್ಲಿ ಸಕಲೇಶಪುರ ತಾಲ್ಲೂಕಿನ ಹಾನು ಬಾಳು ಗ್ರಾಮದ ಸಂಬಂಧಿಕರ ಮನೆಗೆ ತೆರಳಿ ರಾತ್ರಿ ಊರಿಗೆ ವಾಪಸಾಗುತ್ತಿದ್ದರು. 10.30ರ ಸುಮಾರಿಗೆ ತರಕಾರಿ ತುಂಬಿಕೊಂಡು ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ, ಬಿದರಹಳ್ಳಿ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಿದರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಮಂಜುನಾಥ್ ಡಾಟಾ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು.
ಅಪಘಾತದ ರಭಸಕ್ಕೆ ಲಾರಿ ಬೈಕನ್ನು 1 ಕಿ.ಮೀ ದೂರ ಎಳೆದೊಯ್ದಿದೆ. ಬಿದರಹಳ್ಳಿ ಮೊರಾರ್ಜಿ ಶಾಲೆ ಸಮೀಪ ಅಪಘಾತಕ್ಕೀಡಾದ ಲಾರಿ ರಸ್ತೆ ಬದಿಗೆ ಪಲ್ಟಿಯಾಗಿದೆ. ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಜುನಾಥ್ ಈ ಹಿಂದೆ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಕಳೆದ ವರ್ಷ ಮದುವೆಯಾಗಿದ್ದರು. ಇವರ ತಾಯಿ ಬಿದರಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿದ್ದಾರೆ.
ಒಂದೇ ವಾರದಲ್ಲಿ ಇಬ್ಬರು ಸಾವು: ಬಿದರಹಳ್ಳಿ ಸಮೀಪ ಒಂದೇ ವಾರದಲ್ಲಿ ಇಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಳೆದ ವಾರ ಬೈಕ್ ಮತ್ತು ಗ್ಯಾಸ್ ಲಾರಿ ನಡುವೆ ಅಪಘಾತ ಸಂಭವಿಸಿತ್ತು. ಸವಾರನ ಮೇಲೆ ಲಾರಿ ಹರಿದು ಕೊಪ್ಪ ಮೂಲದ ವ್ಯಕ್ತಿ ಸಾವನ್ನಪ್ಪಿದ್ದರು. ನೇರ ಮತ್ತು ಅಗಲವಾದ ರಸ್ತೆ ಇದಾಗಿದ್ದು, ಚಾಲಕರು ಅತಿವೇಗದಲ್ಲಿ ವಾಹನ ಚಲಾಯಿಸುತ್ತಾರೆ. ಹಾಗಾಗಿ ಇಲ್ಲಿ ವೇಗ ನಿರೋಧಕ ಮತ್ತು ಸೂಚನಾ ಫಲಕ ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಉಡುಪಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ: ಆರೋಪಿ ಬಂಧನ