ಚಿಕ್ಕಮಗಳೂರು: ಭತ್ತದ ಗದ್ದೆಗೆ ತೆರಳುವಾಗ ಕಾಲು ಜಾರಿ ಹೇಮಾವತಿ ನದಿಗೆ ಬಿದಿದ್ದ ವೃದ್ಧೆಯ ಶವ ಪತ್ತೆ ಆಗಿದೆ. ದಾರದಹಳ್ಳಿ ಗ್ರಾಮದ ದೇವಮ್ಮ(60) ಮೃತ ವೃದ್ಧೆ. ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದ ಬಳಿ ಇರುವ ಹೇಮಾವತಿ ನದಿಯಲ್ಲಿ ಘಟನೆ ನಡೆದಿದೆ. ಕಳೆದ 3 ದಿನದಿಂದ ದೇವಮ್ಮ ಕಾಣೆಯಾಗಿದ್ದರು. ನೆಂಟರ ಮನೆಗೆ ಹೋಗಿರ ಬಹುದು ಎಂದು ಅವರ ಕುಟುಂಬದವರು ಭಾವಿಸಿದ್ದರು. ದೇವಮ್ಮನ ಮನೆಯಿಂದ ಸುಮಾರು ಒಂದೂವರೆ ಕಿಮೀ ದೂರದ ಹೇಮಾವತಿ ನದಿಯಲ್ಲಿ ಈಗ ಶವ ಪತ್ತೆಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಮೂಡಿಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತೊಂದೆಡೆ, ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೂಡಿಗೆರೆ, ಕಳಸ, ಕೊಪ್ಪ, ಎನ್ಆರ್ ಪುರ, ಶೃಂಗೇರಿ ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚಾರ್ಮಾಡಿ ಘಾಟ್ನಲ್ಲಿ ಮಳೆ ಅಬ್ಬರಿಸುತ್ತಿದೆ. ಭಾರಿ ಮಳೆ ಗಾಳಿಗೆ ಹೊರನಾಡು - ಕೊಟ್ಟಿಗೆಹಾರ ಮಧ್ಯದ ಬಾಳೂರು ಎಸ್ಟೇಟ್ ಬಳಿ ಮರಗಳು ರಸ್ತೆಯ ಮೇಲೆ ಉರುಳಿಬಿದ್ದಿವೆ. ಇದರಿಂದ ಕೆಲಕಾಲ ಹೊರನಾಡು ರಸ್ತೆ ಸಂಪರ್ಕ ಬಂದ್ ಆಗಿತ್ತು.
ಧರ್ಮಸ್ಥಳ ವಿಪತ್ತು ನಿರ್ವಹಣ ತಂಡ ಮತ್ತು ಸ್ಥಳೀಯರು ಮರಗಳನ್ನು ರಸ್ತೆಯ ಮೇಲಿನಿಂದ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇನ್ನು ಶೃಂಗೇರಿ ತಾಲೂಕಿನ ಕೆರೆಕಟ್ಟೆ ಚೆಕ್ ಪೋಸ್ಟ್ ಬಳಿ ಲಾರಿ ಮೇಲೆ ಮರ ಉರುಳಿ ಬಿದ್ದಿದ್ದು, ಲಾರಿ ಸಂಪೂರ್ಣ ಜಖಂಗೊಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ ಬಳ್ಳಾಲರಾಯನ ದುರ್ಗ ಮತ್ತು ರಾಣಿ ಝರಿ: ವಿಡಿಯೋ
ಬೆಳಗಾವಿಯಲ್ಲಿ ವರುಣನ ಆರ್ಭಟ: ಮತ್ತೊಂದೆಡೆ, ಕಳೆದ ಮೂರು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪಶ್ಚಿಮಘಟ್ಟ ಪ್ರದೇಶವಾದ ಖಾನಾಪುರ ತಾಲ್ಲೂಕಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಕಾಡಂಚಿನ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಪ್ರಸಿದ್ಧ ಹಬ್ಬಾನಟ್ಟಿ ಮಾರುತಿ ಮಂದಿರ ನೀರಿನಿಂದ ಆವೃತಗೊಂಡಿದೆ.
ಸತತ ಮಳೆಯಿಂದಾಗಿ ಮಲಪ್ರಭಾ, ಪಾಂಡರಿ ಮತ್ತು ಮಹದಾಯಿ ನದಿಗಳು, ಕಳಸಾ, ಬಂಡೂರಿ, ಕೋಟ್ನಿ, ಮಂಗೇತ್ರಿ, ಪಣಸೂರಿ, ತಟ್ಟಿ, ಕುಂಭಾರ, ಬೈಲ್ ಮತ್ತಿತರ ಹಳ್ಳ-ಕೊಳ್ಳಗಳಲ್ಲಿ ಹರಿವು ಹೆಚ್ಚಾಗಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಮಂಗಳವಾರದವರೆಗೆ ತಾಲೂಕಿನ ಕಣಕುಂಬಿಯಲ್ಲಿ 7.8 ಸೆಂ.ಮೀ, ಲೋಂಡಾದಲ್ಲಿ 3.6 ಸೆಂ.ಮೀ ಮಳೆ ಬಿದ್ದಿದೆ. ಗುಂಜಿಯಲ್ಲಿ 5.3 ಸೆಂ.ಮೀ, ಜಾಂಬೋಟಿಯಲ್ಲಿ 4.5 ಸೆಂ.ಮೀ, ಅಸೋಗಾದಲ್ಲಿ 3.3 ಸೆಂ.ಮೀ, ಖಾನಾಪುರ, ನಾಗರಗಾಳಿ, ಬೀಡಿ, ಕಕ್ಕೇರಿ ಹಾಗೂ ಇತರೆ ಭಾಗಗಳಲ್ಲಿ ಸರಾಸರಿ 2.5 ಸೆಂ.ಮೀ ಮಳೆ ದಾಖಲಾಗಿದೆ.
ಇದನ್ನೂ ಓದಿ: ಮುಳ್ಳಯ್ಯನಗಿರಿಗೆ ರೋಪ್‌ವೇ: ತಜ್ಞರ ತಂಡದಿಂದ ಸ್ಥಳ ಪರಿಶೀಲನೆ