ಚಿಕ್ಕಮಗಳೂರು : ಮಲೆನಾಡಿನ ಈ ಗ್ರಾಮದಲ್ಲಿ ಓಡಾಡುವುದಕ್ಕೆ ರಸ್ತೆ ಸೌಕರ್ಯವೇ ಇಲ್ಲದೆ ಇಲ್ಲಿನ ಜನ ಬೇಸತ್ತು ಹೋಗಿದ್ದಾರೆ. ಸಂಚರಿಸಲು ಸರಿಯಾದ ರಸ್ತೆ ಇಲ್ಲದೆ ಜನರು ಪರದಾಡುವುದು ಇಲ್ಲಿ ಸಾಮಾನ್ಯವಾಗಿದೆ. ಜಿಲ್ಲೆಯ ಕಳಸ ತಾಲೂಕಿನ ಹೊಸೂರು ಗ್ರಾಮದ ಜನ ತಮ್ಮ ಊರಿಗೆ ತಾವೇ ರಸ್ತೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಮಳೆಗಾಲದಲ್ಲಿ ಇಲ್ಲಿನ ರಸ್ತೆ ಕೊಚ್ಚಿ ಹೋಗಿ ಜನರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಸೂರು ಗ್ರಾಮದಲ್ಲಿ ಸುಮಾರು 25 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಎಲ್ಲರೂ ಆದಿವಾಸಿಗಳು. ಮಳೆಗಾಲದಲ್ಲಿ ಇಲ್ಲಿನ ರಸ್ತೆಗಳು ಕೊಚ್ಚಿ ಹೋಗಿ ಇವರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಗೆ ಸುತ್ತಮುತ್ತಲಿನ ಗುಡ್ಡದ ಮಣ್ಣು ಜರಿದು ರಸ್ತೆ ಮರೆಯಾಗುತ್ತದೆ.
ಸಂಪೂರ್ಣ ಹದಗೆಟ್ಟಿರುವ ರಸ್ತೆ : ಈ ಹೊಸೂರು ಗ್ರಾಮದಿಂದ ಮುಖ್ಯ ರಸ್ತೆಗೆ ಸುಮಾರು ನಾಲ್ಕೈದು ಕಿಮೀ ದೂರವಿದ್ದು, ಇಲ್ಲಿನ ಜನರು ನಡೆದುಕೊಂಡೇ ಹೋಗಬೇಕಾದ ಸ್ಥಿತಿ ಇದೆ. ಈ ಮಾರ್ಗ ಕಲ್ಕೋಡು, ಕಾರ್ಲೆ, ಅಬ್ಬಿಕೂಡಿಗೆ, ಹೊರನಾಡು ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆಯಾದರೂ,ಈ ರಸ್ತೆ ಸರಿ ಇಲ್ಲ ಎಂಬ ಕಾರಣಕ್ಕೆ ಸಂಚಾರ ಕಡಿಮೆಯಾಗಿದೆ. ಇಲ್ಲಿನ ಜನರು ಅನಿವಾರ್ಯವಾಗಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ, ಬೇರೆ ದಾರಿ ಇಲ್ಲದೇ ಇಲ್ಲಿ ಸಾಗಬೇಕು.
ರಸ್ತೆ ಇಲ್ಲದೆ ರೈತರ ಪರದಾಟ : ಇಲ್ಲಿನ ಜನರು ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ತಾವು ಬೆಳೆದ ಭತ್ತ, ಅಡಕೆ, ಕಾಫಿ, ಮೆಣಸು ಮಾರುಕಟ್ಟೆಗೆ ಸಾಗಾಟ ಮಾಡಲು ಸರಿಯಾದ ರಸ್ತೆ ಇಲ್ಲದೆ ರೈತರೇ ಐದು ಕಿಮೀ ಗಳಷ್ಟು ಹೊತ್ತುಕೊಂಡು ಬರಬೇಕಾದ ಪರಿಸ್ಥಿತಿ ಇದೆ. ಜೊತೆಗೆ ಜಮೀನಿಗೆ ತೆರಳಲು ಕಷ್ಟಪಡುವ ಪರಿಸ್ಥಿತಿ. ಮಳೆಗಾಲದಲ್ಲಂತೂ ರಸ್ತೆ ಇಲ್ಲದೆ ಮಕ್ಕಳು,ಹಿರಿಯರು, ಮಹಿಳೆಯರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಈ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ವಿಶ್ವ ವಿಖ್ಯಾತ ದಸರಾ: ಮೆರುಗು ಕಟ್ಟಿದ ರೈತ ಕ್ರೀಡಾಕೂಟ ಉತ್ಸವ