ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ವೈದ್ಯನ ಕೊರೊನಾ ಪಾಸಿಟಿವ್ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಈ ಪ್ರಕರಣದಿಂದ ಜಿಲ್ಲೆಯ ಜನರಲ್ಲಿ ಅನೇಕ ಗೊಂದಲ ಹಾಗೂ ಆತಂಕ ಮೂಡಿತ್ತು. ಇಂದು ಮತ್ತೆ ಈ ವೈದ್ಯನ ಗಂಟಲು ದ್ರವ, ಹಾಗೂ ರಕ್ತದ ಮಾದರಿ ಪರೀಕ್ಷೆಯ ಫಲಿತಾಂಶ ಲಭ್ಯವಾಗಿದ್ದು, ನೆಗೆಟಿವ್ ಎಂದು ವರದಿ ಬಂದಿದೆ. ಈ ಮೂಲಕ ಮೂಡಿಗೆರೆ ತಾಲೂಕಿನ ಜನರು ನಿಟ್ಟುಸಿರು ಬಿಡುವಂತಾಗಿದೆ. ಕಳೆದ 19ರಂದು ವೈದ್ಯನನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಗ ಫಲಿತಾಂಶ ಪಾಸಿಟಿವ್ ಬಂದಿತ್ತು. ನಂತರ ಮತ್ತೆ ವೈದ್ಯನನ್ನು ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬಂದಿದೆ ಎಂದು ತಿಳಿಸಿದರು.
ಈ ಪ್ರಕರಣವನ್ನು ಇನ್ನೂ ಖಚಿತವಾಗಿ ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೊಮ್ಮೆ ಜಿಲ್ಲಾಡಳಿತದಿಂದ ವೈದ್ಯನ ಗಂಟಲು ದ್ರವ ಹಾಗೂ ರಕ್ತ ಪರೀಕ್ಷೆಯನ್ನು ಶಿವಮೊಗ್ಗ-ಬೆಂಗಳೂರು ಹಾಗೂ ಹಾಸನಕ್ಕೆ ರವಾನೆ ಮಾಡಲಾಗಿತ್ತು. ಒಟ್ಟು 6 ಬಾರಿ ವೈದ್ಯನ ಗಂಟಲು ದ್ರವ ಹಾಗೂ ರಕ್ತ ಪರೀಕ್ಷೆ ನಡೆಸಲಾಗಿದ್ದು, 6 ಬಾರಿಯೂ ವೈದ್ಯನ ವರದಿ ನೆಗೆಟಿವ್ ಬಂದಿದೆ. ಈಗಾಗಲೇ ವೈದ್ಯನೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 1000 ಕ್ಕೂ ಅಧಿಕ ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು.
ಇದು ಲ್ಯಾಬ್ನಿಂದ ಆಗಿರುವ ತಪ್ಪು. ಈ ವೈದ್ಯನಿಗೆ ಕೊರೊನಾ ತಗುಲಿಲ್ಲ. ಕೆಲವೊಮ್ಮೆ ಈ ರೀತಿಯ ಗೊಂದಲಗಳು ಆಗುತ್ತವೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ಈ ವಿಚಾರಗಳನ್ನು ತರಲಾಗಿದ್ದು, ಜಿಲ್ಲೆಯಲ್ಲಿ 9 ಪ್ರಕರಣಗಳು ಅಷ್ಟೇ ಇವೆ. 10 ಪ್ರಕರಣಗಳಲ್ಲ ಎಂದು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ.
ವೈದ್ಯನ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕದಲ್ಲಿದ್ದ 1000ಕ್ಕೂ ಅಧಿಕ ಜನರನ್ನು ಮಧ್ಯಾಹ್ನದ ನಂತರ ಬಿಡುಗಡೆ ಮಾಡಲಾಗುವುದು. ವೈದ್ಯರು ಕೂಡಾ ನಾಳೆಯಿಂದ ತಮ್ಮ ವೃತ್ತಿಯನ್ನು ಮಾಡಬಹುದು. ಜನರು ಯಾವುದೇ ಕಾರಣಕ್ಕೂ ಆತಂಕ ಪಡುವುದು ಬೇಡ. ಇದು ಲ್ಯಾಬ್ನಿಂದ ಆಗಿರುವ ತಪ್ಪು ಅಷ್ಟೇ ಎಂದು ಜಿಲ್ಲಾಧಿಕಾರಿ ತಿಳಿಸಿದರು.