ಚಿಕ್ಕಮಗಳೂರು: ದತ್ತ ಜಯಂತಿಯನ್ನು ಅದ್ಧೂರಿಯಾಗಿ ಮಾಡಬಾರದು ಎಂಬ ಉದ್ದೇಶದಿಂದ ಅನುಸೂಯ ಜಯಂತಿಯಂದು ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲಿ ಮೊಳೆ ಸುರಿದಿದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ಬಂಧಿತ ಆರೋಪಿಗಳಾದ ಮೊಹಮ್ಮದ್ ಶಹಬಾಸ್ ಮತ್ತು ವಾಹಿದ್ ಹುಸೇನ್ ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ತನಿಖೆಯನ್ನು ಸಮಗ್ರವಾಗಿ ನಡೆಸುತ್ತಿದ್ದೇವೆ. ಆರೋಪಿಗಳು ಸಂಘಟನೆಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಸಾಧ್ಯತೆ ಇದೆ. ಇಬ್ಬರು ಆರೋಪಿಗಳು ಚಿಕ್ಕಮಗಳೂರು ನಗರ ನಿವಾಸಿಗಳು ಆಗಿದ್ದು, ಪ್ರಾಥಮಿಕ ತನಿಖೆಯಲ್ಲಿ ದತ್ತಜಯಂತಿ ನಿಲ್ಲಿಸುವ ಆಲೋಚನೆಯಲ್ಲಿದ್ದ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದರು.
ದತ್ತಜಯಂತಿ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಹಿಂದೂ ಪರ ಸಂಘಟನೆಗಳ ಸಂಭ್ರಮ ಮನೆ ಮಾಡಿತ್ತು. ಎಲ್ಲೆಡೆ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ಇದನ್ನು ಸಹಿಸದೇ ಏನಾದರೂ ಮಾಡಿ ಸಂಭ್ರಮಕ್ಕೆ ಬ್ರೇಕ್ ಹಾಕಲು ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.
ಇದನ್ನೂ ಓದಿ: ದತ್ತಪೀಠಕ್ಕೆ ಸಾಗುವ ರಸ್ತೆಯುದ್ದಕ್ಕು ಮೊಳೆ ಹಾಕಿದ್ದ ಪ್ರಕರಣ: ಇಬ್ಬರ ಬಂಧನ