ಚಿಕ್ಕಮಗಳೂರು: ವೀಕೆಂಡ್ನಲ್ಲಿ ಮೈ ಮತ್ತು ಮನಸ್ಸು ಹಗುರ ಮಾಡಲು ಮುಳ್ಳಯ್ಯನಗಿರಿ ಪರ್ವತ ಹೇಳಿ ಮಾಡಿಸಿದ ಸ್ಥಳ. ಆದರೆ, ಮನತಣಿಸುವ ಈ ಜಾಗದಲ್ಲಿ ಇದೀಗ ಆತಂಕದ ಛಾಯೆ ಆವರಿಸುವಂತಾಗಿದೆ.
ಹೌದು, ರಸ್ತೆ ವಿಸ್ತರಣೆ ಹೆಸರಲ್ಲಿ ಮುಳ್ಳಯ್ಯನಗಿರಿ ತುದಿಯಲ್ಲಿ ಕಲ್ಲುಗಳನ್ನು ಬ್ಲಾಸ್ಟ್ ಮಾಡಲಾಗುತ್ತಿದ್ದು ಗಿರಿಗಳ ಆಯಸ್ಸು ಮುಗಿಯಿತೇ ಎನ್ನುವ ಅನುಮಾನ ಮೂಡುತ್ತಿದೆ. ಇಂದು ರಸ್ತೆಗಳ ನೆಪದಲ್ಲಿ ಗಿರಿಗಳನ್ನು ಬ್ಲಾಸ್ಟ್ ಮಾಡುತ್ತಿದ್ದು, ನಾಳೆ ಅಭಿವೃದ್ಧಿ ಹೆಸರಲ್ಲಿ ಹೋಂ ಸ್ಟೇ, ರೆಸಾರ್ಟ್, ಬಿಲ್ಡಿಂಗ್ ನಿರ್ಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದರಿಂದಾಗುವ ಅನಾಹುತ ಸಣ್ಣಪ್ರಮಾಣದ್ದಂತೂ ಅಲ್ಲವೇ ಅಲ್ಲ.
ಪ್ರಾಣಿ - ಪಕ್ಷಿಗಳು, ನೀರಿನ ಮೂಲ, ಶೋಲಾ ಅರಣ್ಯ, ಹುಲ್ಲುಗಾವಲಿನ ಬಗ್ಗೆ ಇಲ್ಲಿ ಯಾರಿಗೂ ಕಾಳಜಿಯೇ ಇಲ್ಲದಾಗಿದೆ ಎಂದು ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಹಾಳು ಮಾಡುತ್ತಿರುವ ಸರ್ಕಾರದ ವಿರುದ್ಧ ಸ್ಥಳೀಯ ಪ್ರಜ್ಞಾವಂತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವದಲ್ಲೇ ಸೂಕ್ಷ್ಮವಾದ ಪ್ರದೇಶಗಳಲ್ಲಿ ಮುಳ್ಳಯ್ಯನಗಿರಿಯೂ ಒಂದು. ಇಲ್ಲಿ ಮಣ್ಣು ತೆಗೆಯೋದು, ಗುಂಡಿ ಅಗೆಯೋದು, ಬ್ಲಾಸ್ಟ್ ಮಾಡೋದು ಮಾಡಿದರೆ ಮಳೆಗಾಲದಲ್ಲಿ ಅದು ಕುಸಿಯುತ್ತೆ. ಅದರಿಂದಾಗುವ ಅನಾಹುತ ಬಹುದೊಡ್ಡದ್ದು. ಈ ಹಿಂದೆ ಮಳೆಗಾಲದಲ್ಲಿ ಅಲ್ಲಲ್ಲಿ ಗುಡ್ಡ ಕುಸಿದ ಉದಾಹರಣೆಗಳಿವೆ.
ಒಮ್ಮೆ ಈ ಗಿರಿಯನ್ನು ನಾಶ ಮಾಡಿದರೆ, ಅದನ್ನು ಮತ್ತೆ ನಿರ್ಮಿಸೋದಕ್ಕೆ ಆಗಲ್ಲ. ಅಪರೂಪದ ಪ್ರಕೃತಿ ಸಂಪತ್ತನ್ನು ಉಳಿಸಿಕೊಳ್ಳುವ ಬದಲು ಸರ್ಕಾರ ಅಳಿಸಲು ಮುಂದಾಗುತ್ತಿದೆ. ಈ ಅರಣ್ಯ ನಾಶವಾದರೆ ಅಂತರ್ಜಲ ಮಟ್ಟ ಕುಸಿಯುತ್ತೆ. ಶೋಲಾ ಅರಣ್ಯ ನಾಶವಾದರೆ ನೀರಿನ ಸೆಲೆ ಬತ್ತಿ ಹೋಗುತ್ತದೆ. ನೀರನ್ನು ವರ್ಷವಿಡಿ ಹಿಡಿದಿಟ್ಟು ಹರಿಸುವ ಹುಲ್ಲುಗಾವಲು ನಾಶವಾಗಿ ಹೋಗುತ್ತೆ. ಹಾಗಾಗಿ ಇದರ ರಕ್ಷಣೆ ಅತ್ಯವಶ್ಯಕ ಎನ್ನುತ್ತಾರೆ ಪರಿಸರವಾದಿಗಳು.