ಚಿಕ್ಕಮಗಳೂರು: ತನ್ನ ತಾಯಿ ಸತ್ತಾಗ, ಅಂತ್ಯ ಸಂಸ್ಕಾರವನ್ನ ನೆರವೇರಿಸುವುದು ಇರಲಿ ಆಕೆಯ ಮುಖ ನೋಡವುದಕ್ಕೂ ಸಾಧ್ಯವಾಗಲ್ಲ ಅಂದರೆ ಅದಕ್ಕಿಂತ ದುರಂತ ಮತ್ತೊಂದಿಲ್ಲ. ಅಂತಹದೊಂದು ಕರಳು ಹಿಂಡುವ ಸನ್ನಿವೇಶವನ್ನು ಮಹಾಮಾರಿ ಕೊರೊನಾ ತಂದೊಡ್ಡಿದೆ. ಜಿಲ್ಲೆಯಲ್ಲಿ ಹೆಮ್ಮಾರಿ ಕೊರೊನಾ ತಾಯಿಯನ್ನು ಬಲಿ ಪಡೆದಿದ್ದರೆ, ಮಗನನ್ನು ತನ್ನ ಬಲೆಗೆ ಹಾಕಿಕೊಂಡಿದೆ.
ಜಿಲ್ಲೆಯ ತರೀಕೆರೆ ತಾಲೂಕಿನ ಢಣಾಯಕಪುರದ 72 ವರ್ಷದ ವೃದ್ಧೆ ಕೊರೊನಾಗೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದ್ದಾರೆ. ಈಗ ಆಕೆಯ ಮಗನಿಗೂ ಕೊರೊನಾ ದೃಢಪಟ್ಟಿದೆ. ತಾಯಿಯ ಕೊನೆ ಕ್ಷಣದಲ್ಲಿ ಜೊತೆ ಇರಲಾರದಕ್ಕೆ ಮಗ ಕಣ್ಣೀರು ಹಾಕಿದ್ದಾರೆ. ನಿನ್ನೆ ರಾತ್ರಿಯೇ ತಹಸೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ, ಇಬ್ಬರು ಪೊಲೀಸರು, ಇಬ್ಬರು ಆರೋಗ್ಯ ಇಲಾಖೆಯ ಸಿಬ್ಬಂದಿ ಸಮಕ್ಷಮ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಮೃತ ವೃದ್ಧೆ ದಾವಣಗೆರೆಯ ಚನ್ನಗಿರಿ ಪಟ್ಟಣದ ಮಗಳ ಮನೆಗೆ ಹೋಗಿದ್ದರು. ಮಗಳ ಮನೆಯ ಎದುರಿನ ಮನೆಯ 56 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ರೋಗಿ ಸಂಖ್ಯೆ-7753 ಸಂಪರ್ಕದಿಂದ ಸೋಂಕು ತಗುಲಿತ್ತು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಅವರಿಗೆ ಜ್ವರ ಕಾಣಿಸಿಕೊಂಡ ಕಾರಣ ಚಿಕಿತ್ಸೆಗೆ ದಾವಣಗೆರೆಯ ಚನ್ನಗಿರಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಗುಣಮುಖರಾಗದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಬೀರೂರು, ಅಜ್ಜಂಪುರ, ತರೀಕೆರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಅದಾದ ಬಳಿಕ ಕೊರೊನಾ ಖಚಿತವಾಗಿತ್ತು. ಇದರಿಂದ ವೃದ್ಧೆಗೆ ಚಿಕಿತ್ಸೆ ನೀಡಿದ್ದ ವೈದ್ಯರು, ನರ್ಸ್ಗಳಿಗೆ ಇದೀಗ ಕೊರೊನಾ ಕಂಟಕ ಎದುರಾಗಿದೆ.
ಮೃತಪಟ್ಟ ವೃದ್ಧೆಯ ಪುತ್ರನಿಗೂ ಕೊರೊನಾ ಪಾಸಿಟಿವ್ ಬಂದಿರುವುದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. 52 ವರ್ಷದ ಆ ವ್ಯಕ್ತಿ ಹಲವರ ಸಂಪರ್ಕ ಹೊಂದಿದ್ದು, ಅವರೆಲ್ಲ ಆರಾಮವಾಗಿ ಓಡಾಟ ನಡೆಸಿರೋದರಿಂದ ಮತ್ತೇನು ಆಪತ್ತು ಕಾದಿದೆಯೋ ಎಂಬ ಆತಂಕ ಚಿಕ್ಕಮಗಳೂರು ಜನತೆಗೆ ಕಾಡುತ್ತಿದೆ. ಜಿಲ್ಲೆಯಲ್ಲಿ ಈವರೆಗೂ ದಾಖಲಾದ ಸೋಂಕಿತರ ಸಂಖ್ಯೆ 24.