ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯಲ್ಲಿ 39 ವರ್ಷದ ಕೊರೊನಾ ಸೋಂಕಿತ ಸಾವನ್ನಪ್ಪಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಆರೋಪಿಸಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಹಲವಾರು ಜನ ಸಾವನ್ನಪ್ಪಿದ್ದಾರೆ. ಆದರೆ, ಲಿಂಗದಹಳ್ಳಿಯಲ್ಲಿ ನಿನ್ನೆ ಸಾವನ್ನಪ್ಪಿದ ಪುರುಷನ ತಾಯಿ ಕೂಡ ಈ ಹಿಂದೆ ಕೊರೊನಾ ಸೋಂಕು ತಗುಲಿ ಸಾವನ್ನಪ್ಪಿದ್ದರು. ಆ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟ ತಕ್ಷಣ ಆಕೆಯ ಕುಟುಂಬದ ಎಲ್ಲಾ ಸದಸ್ಯರಿಗೆ ಗಂಟಲು ದ್ರವ ಪರೀಕ್ಷೆ ನಡೆಸಬೇಕಿತ್ತು. ಆದರೆ, ಆಕೆ ಮೃತಪಟ್ಟು ಎರಡು ದಿನದ ನಂತರ ಕುಟುಂಬದ ಎಲ್ಲಾ ಸದಸ್ಯರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ.
ಪರೀಕ್ಷೆ ನಡೆಸಿ ಒಂದು ವಾರ ಕಳೆದರೂ ಕೊರೊನಾ ರಿಪೋರ್ಟ್ ಬಂದಿರಲಿಲ್ಲ. ನಂತರ ಆ ಪುರುಷನಿಗೆ ಸೋಂಕು ಉಲ್ಬಣವಾಗಿ ಸಾವನ್ನಪ್ಪಿದ್ದಾನೆ. ಸರಿಯಾದ ಸಮಯಕ್ಕೆ ಟೆಸ್ಟ್ ಮಾಡಿ ರಿಪೋರ್ಟ್ ನೀಡಿ ಚಿಕಿತ್ಸೆ ನೀಡಿದ್ದರೆ, ಆತ ಸಾಯುತ್ತಿರಲಿಲ್ಲ ಎಂದಿದ್ದಾರೆ.