ಚಿಕ್ಕಮಗಳೂರು: ಜಾತಿ, ಧರ್ಮದ ಬಗ್ಗೆ ಪದೇ ಪದೇ ಮಾತನಾಡಿ ಮತ ಕೇಳುವುದು, ಹಿಂದೂ ರಾಷ್ಟ್ರ ಮಾಡ್ತೀನಿ ಅನ್ನೋದು, ಸಂವಿಧಾನ ಬದಲಾಯಿಸ್ತೀವಿ ಅನ್ನೋ ಹೇಳಿಕೆಗಳು ನಕ್ಸಲರಿಗಿಂತ ಡೇಂಜರಸ್ ಪದಗಳು. ಹಾಗಾಗಿ ಇವರು ನಕ್ಸಲರಿಗಿಂತ ಡೇಂಜರ್ ಎಂದು ಸಿ.ಟಿ.ರವಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಕಿಡಿಕಾರಿದರು.
ಚಿಕ್ಕಮಗಳೂರಲ್ಲಿ ಮಾಜಿ ಶಾಸಕ ಸಿ.ಟಿ.ರವಿ ಅವರ ಅರ್ಬನ್ ನಕ್ಸಲ್ ಹೇಳಿಕೆ ಬಗ್ಗೆ ಭೋಜೇಗೌಡ ಹೀಗೆ ಪ್ರತಿಕ್ರಿಯೆ ನೀಡಿದರು. ಸಂವಿಧಾನ ಬದಲಾವಣೆ, ರಾಷ್ಟ್ರಧ್ವಜ ಇಳಿಸಿ ಭಗವಾಧ್ವಜ ಹಾಕ್ತೀವಿ ಅನ್ನೋದು, ಹಿಂದೂ ರಾಷ್ಟ್ರದ ಹೇಳಿಕೆಗಳು ನಕ್ಸಲರಿಗಿಂತ ಡೇಂಜರಸ್ ಪದಗಳು. ಹಾಗಾಗಿ ಅವರಿಗಿಂತ ನೀವು (ಸಿ.ಟಿ.ರವಿ) ಡೇಂಜರ್ ಎಂದು ವಾಗ್ದಾಳಿ ನಡೆಸಿದರು.
ಸಿ.ಟಿ.ರವಿ ಅವರಿಗೆ ಕ್ಷೇತ್ರದ ಜನರು ಉತ್ತರ ಕೊಟ್ಟಿದ್ದಾರೆ. ನಾನು ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದೆ. ನಾನು ಜೆಡಿಎಸ್ ಪಕ್ಷದಿಂದಲೇ ಶಿಕ್ಷಣ ಕ್ಷೇತ್ರದ ಅಭ್ಯರ್ಥಿಯಾಗಿ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತೇನೆ. ಕಾಂಗ್ರೆಸ್ ಸೇರ್ಪಡೆ ಬರೀ ವದಂತಿ ಅಷ್ಟೇ ಎಂದರು. ಇದೇ ವೇಳೆ, ಪಠ್ಯ ಪುಸ್ತಕ ಪರಿಷ್ಕರಣೆಯ ವಿಚಾರದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇರಬಾರದು. ಪಠ್ಯ ಪುಸ್ತಕ ವಿಚಾರದಲ್ಲಿ ಎಂಎಲ್ಎ ಗಳಿಗೆ ಏನು ಕೆಲಸ? ಪಠ್ಯ ಪುಸ್ತಕಗಳನ್ನು ಯಾರು ತಯಾರು ಮಾಡುತ್ತಾರೆ? ಯಾರು ಪರಿಪಕ್ವವಾಗಿದ್ದಾರೆ ಎಂದು ಎಸ್.ಎಲ್.ಭೋಜೇಗೌಡ ಪ್ರಶ್ನಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಜೊತೆ ಕೈಜೋಡಿಸಿ ಸಿ ಟಿ ರವಿ ಸೋಲಿಸಿದ ಜೆಡಿಎಸ್ ಅಭ್ಯರ್ಥಿಗೆ ಕಾರ್ಯಕರ್ತರಿಂದ ಹಾಲಿನ ಅಭಿಷೇಕ
ನಗರ ನಕ್ಸಲ್ ಬಗ್ಗೆ ಸಿ.ಟಿ.ರವಿ ಹೇಳಿದ್ದೇನು?: ಮಾಜಿ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮೇ 30 ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ, ಅರ್ಬನ್ ನಕ್ಸಲ್ ಬಗ್ಗೆ ಮಾತನಾಡಿದ್ದರು. ಸರ್ಕಾರ ತಮ್ಮ ಮೆದುಳನ್ನು ನಗರ ನಕ್ಸಲರಿಗೆ ಒಪ್ಪಿಸಿದರೆ ನಾವು ಸುಮ್ಮನೆ ಇರಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಅರ್ಬನ್ ನಕ್ಸಲರು ಬಿಲದಿಂದ ಹೊರ ಬಂದಿದ್ದಾರೆ. ಹಾಗೆಯೇ ಚಿಕ್ಕಮಗಳೂರು ಭಾಗದ ಕೆಲವೆಡೆ ಮತ್ತೆ ನಕ್ಸಲ್ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಛತ್ತೀಸ್ಗಢದಂತೆ ಇಲ್ಲಿಯೂ ಆಗಬಹುದು. ನಮ್ಮ ಸರ್ಕಾರ ಇದ್ದಾಗ ಬಾಲ ಮುದುರಿಕೊಂಡಿದ್ದವರು ಈಗ ಹೊರ ಬಂದಿದ್ದಾರೆ. ಅಂತಹವರಿಗೆ ಬುಲೆಟ್ ಮೇಲೆ ನಂಬಿಕೆ ಇದೆಯೇ ಹೊರತು ಬ್ಯಾಲೆಟ್ ಮೇಲೆ ಅಲ್ಲ ಎಂದು ಸಿ.ಟಿ.ರವಿ ಕಿಡಿಕಾರಿದ್ದರು.
ಅರ್ಬನ್ ನಕ್ಸಲರು ಪಠ್ಯ ಬದಲಾಯಿಸಿದ ಅಂತ ಈಗ ಮುಂದೆ ಬಂದಿದ್ದಾರೆ. ಈ ಮೂಲಕ ತಮ್ಮ ಬೆಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಹೆಡಗೆವಾರ್ ದೇಶ ಪ್ರೇಮ, ಸಂಘದ ದೇಶ ಪ್ರೇಮವನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದ ಹೆಗಡೆವಾರ್ ಅವರ ಪಠ್ಯ ಕೈಬಿಡಲು ಹೊರಟಿದ್ದಾರೆ. ಕಾದು ನೋಡಿ ಏನು ಮಾಡಬೇಕು ಎನ್ನುವುದು ಗೊತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ಸರ್ಕಾರದ ಮೆದುಳನ್ನು ನಗರ ನಕ್ಸಲರಿಗೆ ಕೊಟ್ಟರೆ ಸುಮ್ಮನೆ ಕೂರಲ್ಲ: ಸಿಟಿ ರವಿ