ಚಿಕ್ಕಮಗಳೂರು : ಜಿಲ್ಲೆಯ ಎನ್ಆರ್ಪುರ ತಾಲೂಕಿನ ಸಬ್ ರಿಜಿಸ್ಟರ್ ಕಚೇರಿಗೆ ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ದಿಢೀರ್ ಭೇಟಿ ನೀಡಿದರು.
ಎನ್ಆರ್ಪುರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಸಾರ್ವಜನಿಕರ ಬಳಿ ನಿತ್ಯ ಲಂಚಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎಂದು ಸ್ಥಳೀಯರು ಶಾಸಕ ರಾಜೇಗೌಡ ಅವರ ಬಳಿ ಅಳಲು ತೋಡಿಕೊಂಡಿದ್ದರು. ಇಂದು ಕಚೇರಿಗೆ ಶಾಸಕರು ಖುದ್ದು ಭೇಟಿ ನೀಡಿ, ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮತ್ತೊಮ್ಮೆ ಈ ರೀತಿಯ ಆರೋಪಗಳು ಕೇಳಿ ಬಂದ್ರೆ ಕಚೇರಿಗೆ ಬೀಗ ಹಾಕಿಸಿ ನಾನೇ ನಿಮ್ಮ ವಿರುದ್ಧ ದೂರು ನೀಡುತ್ತೇನೆ. ಕೆಲಸಕ್ಕಾಗಿ ಬರುವ ಬಡವರಿಗೆ ಯಾವುದೇ ತೊಂದರೆ ನೀಡಬೇಡಿ. ಪ್ರಾಮಾಣಿಕವಾಗಿ ಕೆಲಸ ಮಾಡಿ. ಮತ್ತೊಮ್ಮೆ ಲಂಚಕ್ಕೆ ಬೇಡಿಕೆ ಇಡುವ ವಿಚಾರಗಳು ನನ್ನ ಗಮನಕ್ಕೆ ಬಂದ್ರೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.