ಚಿಕ್ಕಮಗಳೂರು : ಕೊರೊನಾ ನಿಯಂತ್ರಿಸಲು ಹರ ಸಾಹಸ ಪಡುತ್ತಿರುವ ಸರ್ಕಾರ ಇಂದು ಲಾಕ್‌ಡೌನ್ ವಿಧಿಸಿ ಜನ ಬೀದಿಗಿಳಿಯದಂತೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಜನಪ್ರತಿನಿಧಿಗಳೇ ನಿಯಮ ಪಾಲಿಸದೆ ಬೇಜವಾಬ್ದಾರಿ ಮೆರೆದಿದ್ದಾರೆ.
ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣಗಳಾದ ದೇವರಮನೆ ಗುಡ್ಡ, ಹೇಮಾವತಿ ನದಿ ಮೂಲ, ಬಲ್ಲಾಳರಾಯನ ದುರ್ಗಕ್ಕೆ ಸಚಿವ ಸಿ ಟಿ ರವಿ ಹಾಗೂ ಶಾಸಕ ಎಂ ಪಿ ಕುಮಾರಸ್ವಾಮಿ ಭೇಟಿ ನೀಡಿದರು. ಈ ವೇಳೆ ಶಾಸಕ ಕುಮಾರಸ್ವಾಮಿಯೇ ಮಾಸ್ಕ್ ಧರಿಸಿರಲಿಲ್ಲ. ಇನ್ನು ಸಚಿವರು, ಶಾಸಕರ ಜೊತೆ ಸಾಮಾಜಿಕ ಅಂತರದ ನಿಯಮ ಗಾಳಿಗೆ ತೂರಿ ನೂರಾರು ಜನ ಸ್ಥಳೀಯರು ನೆರೆದಿದ್ದರು.
ಸರ್ಕಾರ ಕೊರೊನಾ ನಿಯಂತ್ರಿಸಲು ಲಾಕ್‌ಡೌನ್ ಹೇರಿರುವ ದಿನ, ಸರ್ಕಾರದ ಭಾಗವೇ ಆಗಿರುವ ಸಚಿವರು, ಶಾಸಕರು ಈ ರೀತಿ ಬೇಜವಾಬ್ದಾರಿತನ ತೋರಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.