ಚಿಕ್ಕಮಗಳೂರು : ಹೊಂದಾಣಿಕೆ ರಾಜಕೀಯ ಮಾಡಿದ್ದರೆ ಬಿಜೆಪಿ ಬೆಳೆಯುತ್ತಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಹೇಳಿದ್ದಾರೆ.
ನಮ್ಮ ಪಕ್ಷ ಹಾಗೂ ಹಿರಿಯ ಮುಖಂಡರು ಹೊಂದಾಣಿಕೆ ರಾಜಕಾರಣ ಒಪ್ಪಿಕೊಳ್ಳುವುದಿಲ್ಲ. ಪಕ್ಷದ ರಾಜಕೀಯ ಮಾಡಲೇಬೇಕು. ಕೆಲವರು ವ್ಯಕ್ತಿಗತ ರಕ್ಷಣೆ ಮಾಡಿಕೊಳ್ಳಲು ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ. ನಾವು ಅದರ ಬಗ್ಗೆ ಯೋಚನೆ ಮಾಡುವುದಿಲ್ಲ. ಹೊಂದಾಣಿಕೆ ರಾಜಕಾರಣ ಮಾಡುವವರಿಗೆ ಇದು ಅನ್ವಯ ಆಗುತ್ತದೆ ಎಂದರು.
ಯಾರು? ಯಾವಾಗ? ಯಾರ್ಯಾರ ಕಾಲಿಗೆ ಬಿದ್ದಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ರಾಜಕಾರಣಕ್ಕಾಗಿ ಕಾಲು ಹಿಡಿಯುವುದು ತಪ್ಪು. ಹಿರಿತನಕ್ಕೆ ಹಾಗೂ ಸಂಸ್ಕಾರಕ್ಕೆ ಅಥವಾ ಸ್ವಾಮೀಜಿ ಕಾಲು ಹಿಡಿದರೆ ತಪ್ಪಲ್ಲ. ಅದು ಪರಂಪರೆಗೆ ಕೊಡುವ ಗೌರವ. ಸಿ ಪಿ ಯೋಗೇಶ್ವರ್ ಅವರಿಗೆ ನಾನು ಹೇಳುವುದಿಷ್ಟೇ, ನೀವು ಬಂದು ಚಿಕ್ಕಮಗಳೂರು ಜಿಲ್ಲೆಯನ್ನು ನೋಡಿ. ಎಲ್ಲದಕ್ಕೂ ಮಾದರಿಯಾಗಿದೆ ಎಂದು ಹೇಳಿದ್ದಾರೆ.
ಪಂಚಾಯತ್‌ನಿಂದ ಹಿಡಿದು ಸಂಸತ್ತಿನವರೆಗೂ ಬಿಜೆಪಿಯೇ ಅಧಿಕಾರದಲ್ಲಿದೆ. ನೀವು ರಾಮನಗರದಲ್ಲಿ ಪಕ್ಷವನ್ನು ಅದೇ ರೀತಿ ಕಟ್ಟಿ. ಮಾದರಿ ಜಿಲ್ಲೆಯಾಗಲಿದೆ. ನಾವು ಹೊಂದಾಣಿಕೆ ಮಾಡಿಕೊಂಡಿದ್ದರೇ ರಾಜ್ಯದಲ್ಲಿ ಅಧಿಕಾರ ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಆರೋಪ ಮಾಡುವುದು ಸುಲಭ. ಆದರೆ, ಆರೋಪಕ್ಕೆ ಆಧಾರ ಒದಗಿಸುವುದು ಕಷ್ಟ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಡಿರುವುದು ಅಷ್ಟೇ.. ಅವರ ಬಳಿ ಆಧಾರವಿದ್ದರೆ ಉತ್ತರ ನೀಡಿ, ಅದನ್ನು ಲೋಕಾಯುಕ್ತಕ್ಕೆ ಮತ್ತು ಕೋರ್ಟ್ಗೆ ಸಲ್ಲಿಸಲಿ. ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡುತ್ತದೆ ಎಂಬುದು ಸಿದ್ದರಾಮಯ್ಯ ಅವರಿಗೆ ಅನ್ವಯ ಆಗಬಾರದು. ಅವರು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದವರು.
ಆಧಾರವಿದ್ದರೆ ಭಯವೇಕೆ, ಆಧಾರ ವಿಲ್ಲದಿದ್ದರೇ ಭಯಪಡಬೇಕು. ಅವರದು ಆಧಾರರಹಿತ ಆರೋಪವಾಗಿದ್ದರೆ ಕೋರ್ಟ್ ಮತ್ತು ಲೀಗಲ್ ನೋಟಿಸ್ಗೆ ಹೆದರಬೇಕು. ಇಂತಹ ವಿಚಾರದಲ್ಲಿ ಭ್ರಷ್ಟಾಚಾರದ ಆಲೋಚನೆ ಮಾಡುವುದು ತಪ್ಪು. ಡಿನೋಟಿಫಿಕೇಶನ್ನಲ್ಲಿ ರಿಡ್ಯೂ ಎಂಬ ಹೊಸ ಪರಿಭಾಷೆಯನ್ನು ರಾಜ್ಯದಲ್ಲಿ ಹುಟ್ಟು ಹಾಕಿದವರು ಯಾರು? ಅದು ಸಿದ್ದರಾಮಯ್ಯನವರೇ? 600-700 ಎಕರೆ ಡಿನೋಟಿಫಿಕೇಶನ್ ನೆಪದಲ್ಲಿ ರಿಡ್ಯೂ ಮಾಡಿದವರು ಯಾರು? ಈವರೆಗೂ ಉತ್ತರ ಸಿಕ್ಕಿಲ್ಲ. ಈಗ ಪ್ರಶ್ನೆ ಕೇಳುತ್ತಿದ್ದಾರೆ ಎಂದರು.
ಉತ್ತರ ಹೇಳಬೇಕಾದರೂ ಬೇಕಾಗಿದ್ದರೇ ಪ್ರಶ್ನೆ ಕೇಳುತ್ತಿದ್ದಾರೆ. ನಮಗೆ ಉತ್ತರ ಸಿಕ್ಕಿಲ್ಲ. ಆ ರೀತಿಯ ಕೆಲಸ ನಮ್ಮ ಸರ್ಕಾರ ಮಾಡಿಲ್ಲ. ಇಂತಹ ಕೆಲಸ ಯಾರೇ ಮಾಡಿದರೂ ನಮ್ಮ ಸರ್ಕಾರ ಸಹಿಸಿಕೊಳ್ಳುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಹಾಗೂ ಪ್ರಚಾರದ ಸ್ಪರ್ಧೆ ನಡೆಯುತ್ತಿದೆ. ಭ್ರಷ್ಟಾಚಾರದ ಬಗ್ಗೆ ಡಿ ಕೆ ಶಿವಕುಮಾರ್ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಬರುವುದು ಎರಡು ವ್ಯತ್ಯಾಸವಿಲ್ಲ. ಅವರು ಪ್ರಾಮಾಣಿಕರಾಗಿದ್ದರೆ ಅವರ ಆತ್ಮಸಾಕ್ಷಿಗೆ ಕೇಳಿಕೊಳ್ಳಲಿ ಎಂದರು.