ಚಿಕ್ಕಮಗಳೂರು: ಜಿಲ್ಲೆಗೆ ಮಧ್ಯಪ್ರದೇಶದಿಂದ ಕಾಫಿ ತೋಟದ ಕೆಲಸಕ್ಕೆ ಬಂದಿದ್ದ ಮೂವರು ಕಾರ್ಮಿಕರಿಗೆ ಮಂಗನ ಕಾಯಿಲೆ ಇರುವುದು ಧೃಡಪಟ್ಟಿದೆ. ಈ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಮಂಗನಕಾಯಿಲೆ ಈಗ ಚಿಕ್ಕಮಗಳೂರಿಗೆ ಜಿಲ್ಲೆಗೆ ವಕ್ಕರಿಸಿದೆ.
ಎನ್.ಆರ್. ಪುರ ತಾಲೂಕಿನ ಮಡಬೂರು ಎಸ್ಟೇಟ್ ನಲ್ಲಿನ ಕೆಲಸಗಾರರಲ್ಲಿ ಈ ಮಂಗನ ಕಾಯಿಲೆ ಇರೋದು ಧೃಡಪಟ್ಟಿದ್ದು, ಇನ್ನೂ ಮೂವರ ರಕ್ತದ ಮಾದರಿಯನ್ನ ಪರೀಕ್ಷೆಗೆ ಕಳಿಸಲಾಗಿದೆ. ಮೂವರು ಸೋಂಕಿತರಲ್ಲಿ ಇಬ್ಬರು ಮಧ್ಯಪ್ರದೇಶಕ್ಕೆ ಹಿಂದಿರುಗಿದ್ದು, ಓರ್ವ ಮಹಿಳೆಗೆ ಎನ್.ಆರ್. ಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಮಿಕರಿಗೆ ಸೋಂಕು ಹರಡದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದು, ಮಂಗನ ಕಾಯಿಲೆ ಪತ್ತೆಯಾಗಿರುವ ಜಾಗವನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.
ಆ ಜಾಗದ ಐದು ಕಿ.ಮೀ. ಸುತ್ತಳತೆಯಲ್ಲಿ ರೋಗ ಹರಡದಂತೆ ಔಷಧಿಯನ್ನ ಸಿಂಪಡಿಸಿದ್ದು, ಸ್ಥಳಕ್ಕೆ ಆರೋಗ್ಯಾಧಿಕಾರಿ ಸುಭಾಷ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯಿಂದಲೂ ರೋಗ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮಡಬೂರು ಗ್ರಾಮದ ಸುತ್ತುತ್ತಲಿನ ಎಲ್ಲಾ ವಯೋಮಾನದ ಜನರಿಗೂ ಕೆ.ಎಫ್.ಡಿ. ನಿರೋಧಕ ಲಸಿಕೆ ನೀಡಲಾಗುತ್ತಿದ್ದು, ಈ ವೈರಸ್ ಹರಡದಂತೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ.