ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾರೆ. ಹಾರ್ಗೋಡು ಗ್ರಾಮದ 52 ವರ್ಷದ ಆನಂದ್ ದೇವಾಡಿಗ ಆನೆ ದಾಳಿಗೆ ಮೃತಪಟ್ಟಿದ್ದಾರೆ. ಮೃತ ಆನಂದ್ ದೇವಾಡಿಗ ಮನೆಯ ಹಿಂಭಾಗದಲ್ಲಿ ಹಸು ಹುಡುಕಿಕೊಂಡು ಹೋದಾಗ ಈ ದುರ್ಘಟನೆ ಸಂಭವಿಸಿದೆ. ದಾಳಿ ಮಾಡಿದ ಕಾಡಾನೆ ಸುಮಾರು ಅರ್ಧ ಕಿ.ಮೀ ಗಿಂತಲೂ ಹೆಚ್ಚು ದೂರ ಮೃತ ದೇಹವನ್ನು ಎಳೆದೊಯ್ದಿರುವುದಾಗಿ ತಿಳಿದು ಬಂದಿದೆ.
ಮೃತ ಆನಂದ್ ಅವರ ದೇಹದ ಅಂಗಾಗಗಳು ಕಾಡಿನ ಸುಮಾರು ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಅಲ್ಲಲ್ಲೆ ಬಿದ್ದಿವೆ. ಮೃತದೇಹ ಇರುವ ಜಾಗಕ್ಕೂ ಚಪ್ಪಲಿ ಇರುವ ಜಾಗಕ್ಕೂ ಸುಮಾರು ಅರ್ಧ ಕಿ.ಮೀ ದೂರವಿದೆ. ಅಷ್ಟೇ ಅಲ್ಲದೆ ಮೆದುಳು, ಮೂಳೆಯೂ ಒಂದೊಂದು ಜಾಗದಲ್ಲಿ ಬಿದ್ದಿದೆ. ಮೃತ ದೇಹವನ್ನ ಕಾಡಿನಲ್ಲಿ ಎಳೆದು ತಂದಿರುವುದರಿಂದ ಕಾಡಿನ ಮರಗಿಡಿಗಳಿಗೆ ಸಿಲುಕಿ ಮೃತದೇಹದ ಮೇಲೆ ಯಾವುದೇ ಬಟ್ಟೆ ಇಲ್ಲದಂತಾಗಿದೆ. ಛಿದ್ರವಾಗಿರುವ ಮೃತದೇಹವನ್ನ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆ ನಿನ್ನೆ ಸಂಜೆಯೂ ನಡೆದರೂ ಬೆಳಗ್ಗೆವರೆಗೂ ಯಾರಿಗೂ ಮಾಹಿತಿ ಇರಲಿಲ್ಲ. ಮನೆಯವರು ಆನಂದ್ ಎಲ್ಲೋ ಹೋಗಿದ್ದಾರೆ, ಬರುತ್ತಾರೆ ಎಂದು ಸುಮ್ಮನಾಗಿದ್ದಾರೆ. ಆದರೆ, ಬೆಳಗ್ಗೆ ಆದರೂ ಮನೆಗೆ ಬಾರದೇ ಇದ್ದಾಗ ಸ್ಥಳೀಯರು ಎರಡು ಗುಂಪುಗಳಾಗಿ ಮನೆ ಹಿಂದಿನ ಕಾಡಿನಲ್ಲಿ ಹುಡುಕಾಡಿದ್ದಾರೆ. ಆಗ ಮೃತದೇಹ ಪತ್ತೆಯಾಗಿದೆ. ಬೆಳಗ್ಗೆ ಸ್ಥಳಿಯರು ಸ್ಥಳಕ್ಕೆ ಬರುವವರೆಗೂ ಆನೆ ಮೃತ ದೇಹವಿದ್ದ ಸ್ಥಳದಲ್ಲೇ ಇರುವುದು ಕಂಡು ಬಂದಿದೆ.
ಸ್ಥಳೀಯರು ಬಂದ ಬಳಿಕ ಆನೆಗಳು ಸ್ಥಳದಿಂದ ಕಾಲ್ಕಿತ್ತಿವೆ. ಮೂಡಿಗೆರೆ ತಾಲೂಕಿನ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಾಳಿ ಮಿತಿ ಮೀರಿದೆ. ಕಳೆದೊಂದು ವಾರದಿಂದ 13 ಕಾಡಾನೆಗಳ ಹಿಂಡು ತಾಲೂಕಿನಾದ್ಯಂತ ಅಲ್ಲಲ್ಲಿ ದಾಂಧಲೆ ನಡೆಸುತ್ತಿವೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕೂಡ ಕೈ ಕಟ್ಟಿ ಕುಳಿತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಓದಿ: ಮಧ್ಯಪ್ರದೇಶದಲ್ಲಿ ಆನೆಗಳ ಹಾವಳಿ.. ಗಜಪಡೆ ಕಾಲ್ತುಳಿತಕ್ಕೆ ಬಲಿಯಾದವರೆಷ್ಟು?