ಚಿಕ್ಕಮಗಳೂರು: ಬಿಂದಾಸ್ ಸ್ಟೆಪ್ಸ್ ಹಾಕ್ತಿರೋ ವರ. ವರನಿಗೆ ಸಾಥ್ ನೀಡ್ತಿರೋ ವಧು. ವಧು-ವರರ ಹೆಜ್ಜೆಗೆ ಹೆಜ್ಜೆಯಾಗ್ತಿರೋ ಜನ. ಇದೆಲ್ಲ ಕಂಡು ಬಂದಿದ್ದು ಚಿಕ್ಕಮಗಳೂರಿನ ನಿರಾಶ್ರಿತರ ಕೇಂದ್ರದಲ್ಲಿ. ಹೌದು ಕಾಫಿನಾಡು ವಿಶೇಷ ಮದುವೆ ಸಮಾರಂಭವೊಂದಕ್ಕೆ ಸಾಕ್ಷಿಯಾಗಿದೆ.
ಇವರ ಹೆಸರು ಕುಮಾರ್, ಈಕೆ ರೇಣುಕಾ. ಈ ಜೋಡಿಹಕ್ಕಿ ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಕಳೆದ ಮೂರು ವರ್ಷಗಳ ಹಿಂದೆ ಗಾರೆ ಕೆಲಸ ಮಾಡುವಾಗ ಇವರಿಬ್ಬರಿಗೂ ಚನ್ನಗಿರಿಯಲ್ಲಿ ಪ್ರೇಮಾಂಕುರವಾಗಿತ್ತು. ಅಲ್ಲಿಂದ ಚಿಕ್ಕಮಗಳೂರಿನ ಸಖರಾಪಟ್ಟಣದಲ್ಲಿ ನೆಲೆಸಿದ್ದರು. ಒಟ್ಟಿಗೆ ಇದ್ದರೂ ಮದುವೆ ಆಗಿರಲಿಲ್ಲ. ಕೊರೊನಾ ಎರಡನೇ ಅಲೆಯ ಅಬ್ಬರದಲ್ಲಿ ಕೆಲಸ ಸಿಗದಿದ್ದಾಗ ಚಿಕ್ಕಮಗಳೂರಲ್ಲಿ ಪ್ಲಾಸ್ಟಿಕ್ ಆರಿಸಿಕೊಂಡು ಜೀವನ ನಡೆಸುತ್ತಿದ್ದರು. ಆಗ ಕಾಫಿನಾಡಿನಲ್ಲಿನ ನಿರಾಶ್ರಿತರ ಕೇಂದ್ರ ಮಲೆನಾಡು ಕ್ರೈಸ್ತ ಸಂಘ ಇವರಿಗೆ ಸೂರು ಕಲ್ಪಿಸಿತ್ತು.
ಹಿಂದೆ-ಮುಂದಿಲ್ಲದೆ ಮೂರು ವರ್ಷದಿಂದ ಒಟ್ಟಿಗೆ ಬದುಕುತ್ತಿದ್ದ ಇವರಿಗೆ ಮಲೆನಾಡು ಕ್ರೈಸ್ತ ಸಂಘ ನಿರಾಶ್ರಿತರ ಕೇಂದ್ರದಲ್ಲೇ ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಸಿ ಹೊಸ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಇದರ ಜೊತೆಗೆ ಬೀದಿಯಲ್ಲಿ ಸಿಕ್ಕಿದವರು ಮತ್ತೆ ಬೀದಿಗೆ ಬರೋದು ಬೇಡ ಎಂದು ಇಬ್ಬರಿಗೂ ನಗರದ ಹೋಂ ಸ್ಟೇವೊಂದರಲ್ಲಿ ಕೆಲಸ, ಊಟ, ವಸತಿ ಎಲ್ಲಾ ನೀಡಲಾಗಿದೆ.
ರಾಜ್ಯ ಅನ್‍ಲಾಕ್ ಆದ ಹಿನ್ನೆಲೆಯಲ್ಲಿ ಕಳೆದ 65 ದಿನಗಳಿಂದ ನಿರಾಶ್ರಿತ ಕೇಂದ್ರ ತೆರದಿದ್ದ ಮಲೆನಾಡು ಕ್ರೈಸ್ತ ಸಂಘ, ನಿರಾಶ್ರಿತ ಕೇಂದ್ರವನ್ನು ಮುಚ್ಚುವ ಮುನ್ನ ಎಲ್ಲೋ ಪ್ರೀತ್ಸಿ, ಇನ್ಯಾವ್ದೋ ರೀತಿ ಬದುಕ್ತಿದ್ದ ಪ್ರೇಮಿಗಳನ್ನು ಒಗ್ಗೂಡಿಸುವ ಮೂಲಕ ಕ್ರೈಸ್ತ ಸಂಘದ ಸಹೃದಯಿಗಳು ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ. ಈ ಒಳ್ಳೆಯ ಕೆಲಸ ಜಿಲ್ಲೆಯ ಜನರ ಮೆಚ್ಚುಗೆ ಪಡೆದಿದೆ.