ಚಿಕ್ಕಮಗಳೂರು: ಕೊರೊನಾ ವೈರಸ್ನಿಂದ ಚಿಕ್ಕಮಗಳೂರು ಜಿಲ್ಲೆ ಮುಕ್ತವಾಗಿದ್ದು, ನಾಳೆಯಿಂದ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.
ಬೆಳಗ್ಗೆ 7 ರಿಂದ ಸಂಜೆ 7 ವರೆಗೆ ಲಾಕ್ಡೌನ್ನಿಂದ ಸಂಪೂರ್ಣ ಸಡಿಲಿಕೆಯಿದ್ದು, ಎಲ್ಲ ಅಂಗಡಿ, ಆಟೋ ಸಂಚಾರ, ಬಸ್ ಸಂಚಾರ ಸೇರಿದಂತೆ ಎಲ್ಲ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ದಕ್ಷಿಣ ಕನ್ನಡ ಭಾಗದ ಚೆಕ್ ಪೋಸ್ಟ್ ನಲ್ಲಿ ಮತ್ತಷ್ಟು ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ರೆಡ್ ಝೋನ್ನಿಂದ ಚಿಕ್ಕಮಗಳೂರು ಜಿಲ್ಲೆಗೆ ಬರುವವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಅಲ್ಲದೇ ರೆಡ್ ಝೋನ್, ಆರೆಂಜ್ ಝೋನ್ನಿಂದ ಬಂದವರಿಗೆ ಕ್ವಾರೆಂಟೈನ್ ಮಾಡಲಾಗುತ್ತದೆ. ಅಕ್ಕಪಕ್ಕದ ಹಾಸನ, ಶಿವಮೊಗ್ಗ, ಚಿತ್ರದುರ್ಗ ಗ್ರೀನ್ ಝೋನ್ ನಲ್ಲಿರೋದರಿಂದ ಅಂತರ್ ಜಿಲ್ಲಾ ವಾಹನ ಸಂಚಾರಕ್ಕೆ ಮೇ 4 ನಂತರ ಚರ್ಚೆ ಮಾಡಿ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಸಂಜೆ 7 ರಿಂದ ಬೆಳಗ್ಗೆ 7 ವರೆಗೆ ಅವಶ್ಯಕತೆ ಇರುವವರು ಮಾತ್ರ ಓಡಾಡಲು ಅವಕಾಶ ನೀಡಲಾಗಿದ್ದು, ಮೇ 4 ರಿಂದ 17 ವರೆಗೆ ನಿಷೇದಾಜ್ಞೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಆದೇಶಿಸಿದ್ದಾರೆ.