ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಹಲವಾರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಅತಿಯಾದ ನಷ್ಟ ಉಂಟಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಭೂ ಕುಸಿತ, ಗುಡ್ಡ ಕುಸಿತ, ಮನೆಗಳ ಕುಸಿತ ಈ ರೀತಿಯ ಪ್ರಕರಣಗಳು ಸಂಭವಿಸಿವೆ. ಈ ಹಿನ್ನೆಲೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಈಗಾಗಲೇ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಸಂತ್ರಸ್ತರಿಗೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದಾರೆ.
ಆದರೆ, ಕೊಪ್ಪ ತಾಲೂಕಿನ ಗುಡ್ಡೆ ತೋಟದಲ್ಲಿ ಸಂತ್ರಸ್ತರನ್ನು ಮಾತನಾಡಿಸದೆ ಹೋದ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದು, ಏಕಾಏಕಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಸಂತ್ರಸ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಹೊರನಾಡು-ಶೃಂಗೇರಿ ಮಾರ್ಗದ ರಸ್ತೆ ತಡೆ ನಡೆಸಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಧಿಕಾರಿಗಳ ನೇತೃತ್ವದಲ್ಲಿ ಮಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ಗುಡ್ಡೆ ತೋಟ ಗ್ರಾಮದಲ್ಲಿ ಕುಸಿದ ಸ್ಥಳ ವೀಕ್ಷಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಇಲ್ಲಿನ ಸಂತ್ರಸ್ತರು ಸಚಿವೆ ಶೋಭಾ ಕರಂದ್ಲಾಜೆ ಅವರು ನಮ್ಮ ಬಳಿ ಮಾತನಾಡಿಲ್ಲ. ನಮ್ಮ ಸಮಸ್ಯೆಯನ್ನು ಆಲಿಸಿಲ್ಲ. ಕೇವಲ ಕಾಟಾಚಾರಕ್ಕೆ ಪ್ರವಾಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ತಮ್ಮ ನೋವನ್ನು ಹೊರ ಹಾಕುತ್ತಿದ್ದಾರೆ.
ಓದಿ: ಬೆಂಗಳೂರು ಗ್ರಾಮಾಂತರ ರೌಡಿಗಳಿಗೆ ಎಸ್. ಪಿ ವಂಶಿಕೃಷ್ಣ ಖಡಕ್ ವಾರ್ನಿಂಗ್...!