ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ನಡೆಯುತ್ತಿರುವ ದತ್ತ ಜಯಂತಿ ಹಿನ್ನೆಲೆ ನಗರದಲ್ಲಿ ಬೃಹತ್ ಸಂಕೀರ್ತನಾ ಯಾತ್ರೆ ನಡೆಸಲಾಯಿತು. ಹಾಗಾಗಿ ನಗರ ಇಂದು ಸಂಪೂರ್ಣ ಕೇಸರಿಮಯವಾಗಿತ್ತು.
ನಗರದ ಕಾಮಧೇನು ಗಣಪತಿ ದೇವಾಲಯದಿಂದ ಆರಂಭಗೊಂಡ ಸಂಕೀರ್ತನಾ ಯಾತ್ರೆಯು ಆಜಾದ್ ಪಾರ್ಕ್ ವೃತ್ತದಲ್ಲಿ ಕೊನೆಗೊಂಡಿತು. 1,500ಕ್ಕೂ ಹೆಚ್ಚು ಪೊಲೀಸರ ಸರ್ಪಗಾವಲಿನಲ್ಲಿ ನಡೆದ ಸಂಕೀರ್ತನಾ ಯಾತ್ರೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ದತ್ತ ಮಾಲಾಧಾರಿಗಳು ಪಾಲ್ಗೊಂಡಿದ್ದರು. ಸಂಕೀರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಬಿಜೆಪಿಯ ನೂರಾರು ಮುಖಂಡರು ಭಾಗಿಯಾಗಿದ್ದರು.
ಇದನ್ನೂ ಓದಿ : ಕಾಫಿನಾಡಲ್ಲಿ ದತ್ತ ಜಯಂತಿ ಸಂಭ್ರಮ; ನಗರದೆಲ್ಲೆಡೆ ಕೇಸರಿ ಕಲರವ
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಸಿ.ಟಿ.ರವಿ, ಇದು ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಅಲ್ಲ. ಜನರ ಸಂಕೀರ್ತನಾ ಯಾತ್ರೆ. ಈ ಬಾರಿ ಸರಳವಾಗಿ ಆಚರಣೆ ಮಾಡೋಣ ಅಂತ ಅಂದುಕೊಂಡಿದ್ದೆವು. ಅದರೆ ಸಾವಿರಾರು ಜನರು ಉತ್ಸುಕದಿಂದ ಬಂದು ಭಾಗವಹಿಸಿದ್ದಾರೆ. ಆದರೂ ಏನ್ ಸರ್ ವಾದ್ಯ ಇಲ್ಲ, ವೀರಗಾಸೆ ಇಲ್ಲ ಅಂತ ಕೆಲವರು ನನ್ನನ್ನು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ನಾನು ಮುಂದಿನ ವರ್ಷ ಬಡ್ಡಿ ಸಮೇತ ಆಚರಣೆ ಮಾಡೋಣ ಎಂದು ಅವರಿಗೆ ಹೇಳಿದ್ದೇನೆ ಎಂದು ಖುಷಿ ಹಂಚಿಕೊಂಡರು.
ನಗರದ ಪ್ರಮುಖ ಬೀದಿಗಳಲ್ಲಿ ಸಂಕೀರ್ತನಾ ಯಾತ್ರೆ ಸಾಗುವ ವೇಳೆ ಮನೆಗಳ ಮೇಲೆ ಸಾವಿರಾರು ಮಹಿಳೆಯರು, ಮಕ್ಕಳು, ವಯೋವೃದ್ಧರು ನಿಂತು ಸಂಕೀರ್ತನಾ ಯಾತ್ರೆ ಕಣ್ತುಂಬಿಕೊಂಡರು.