ಚಿಕ್ಕಮಗಳೂರು: ತಾಲೂಕಿನ ಅರಣ್ಯ ವಲಯ ವ್ಯಾಪ್ತಿಯ ಕೆಳಗಾನೆ ಗ್ರಾಮದ ಸಮೀಪದ ಕಾಫೀ ತೋಟದಲ್ಲಿ ಅಕ್ರಮವಾಗಿ ಕಾಡು ಪ್ರಾಣಿಗಳ ಬೇಟೆಗಾಗಿ, ಕಳ್ಳ ಬೇಟೆಗಾರರು ಹಾಕಿದ್ದ ಉರುಳಿಗೆ ಗಂಡು ಚಿರತೆಯೊಂದು ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಾಫೀ ತೋಟದಲ್ಲಿ ಅಕ್ರಮವಾಗಿ ಕಾಡುಪ್ರಾಣಿಗಳ ಬೇಟೆಗಾಗಿ ಉರುಳು ಹಾಕುವ ತಂತ್ರ ಸದ್ದಿಲ್ಲದೆ ಜಿಲ್ಲೆಯಲ್ಲಿ ನಡೆಯುತ್ತಲೇ ಇದೆ. ಆದರೆ ವಿನಾಶದ ಅಂಚಿನಲ್ಲಿರುವ ಹುಲಿ, ಚಿರತೆ ಇನ್ನೂ ಮುಂತಾದ ವನ್ಯ ಪ್ರಾಣಿಗಳ ಜೀವಕ್ಕೆ ಈ ಉರುಳು ಕುತ್ತು ತಂದಿದೆ. ವನ್ಯ ಪ್ರಾಣಿಗಳ ಜೀವಕ್ಕೆ ಅಪಾಯವನ್ನು ತರುವ ಉರುಳು ಹಾಕುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಪ್ರಾಣಿಪ್ರಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಓದಿ:ಅಕ್ರಮ ಕಟ್ಟಡ ಕಟ್ಟಿಕೊಂಡವರಿಗೆ ಬಿಸಿ ಮುಟ್ಟಿಸಲು ಮುಂದಾದ ಹು-ಧಾ ಮಹಾನಗರ ಪಾಲಿಕೆ
ಉರುಳಿಗೆ ಸಿಲುಕಿರುವ ಚಿರತೆ ನೋವಿನಿಂದ ಸ್ಥಳದಲ್ಲಿಯೇ ಒದ್ದಾಡಿ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಪಶು ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಪಟ್ಟ ಚಿರತೆಯ ಅಂತ್ಯ ಸಂಸ್ಕಾರವನ್ನು ಅಲ್ಲಿಯೇ ಮಾಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಅರಣ್ಯ ಇಲಾಖೆಯ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ.