ಚಿಕ್ಕಮಗಳೂರು : ಕುರಿ ಮಂದೆ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಮಲ್ಲೇಶ್ವರ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ತೋಟದ ಮನೆಯಲ್ಲಿ ಕಟ್ಟಿದ್ದ ಕುರಿ ಮಂದೆ ಮೇಲೆ ಚಿರತೆ ದಾಳಿ ನಡೆಸಿದ್ದು, ಒಟ್ಟು 17 ಕುರಿಗಳು ಹಾಗೂ 14 ಮೇಕೆಗಳು ಸಾವನ್ನಪ್ಪಿವೆ.
ಮಲ್ಲೇಶ್ವರ ಗ್ರಾಮದ ಸುಶೀಲಮ್ಮ ಎಂಬುವರ ತೋಟದ ಮನೆಯಲ್ಲಿ ಕಡೂರು ಪಟ್ಟಣದ ನಿವಾಸಿಗಳಾದ ಚಂದ್ರಶೇಖರ್, ಬಸವರಾಜ್, ಮಂಜು ಹಾಗೂ ಲಕ್ಷ್ಮಣ್ ಎಂಬುವವರು ತಮ್ಮ ಕುರಿಗಳನ್ನು ಕಟ್ಟಿದ್ದರು. ಇವುಗಳ ಮೇಲೆ ಚಿರತೆ ದಾಳಿ ನಡೆಸಿದ್ದು, ಒಟ್ಟು 31 ಕುರಿ ಮತ್ತು ಮೇಕೆಗಳು ಸಾವನ್ನಪ್ಪಿದೆ. ಇದರಿಂದಾಗಿ ನಾಲ್ಕು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಮಾಲೀಕರು ಹೇಳಿದ್ದಾರೆ. ಕುರಿಗಳು ಮೃತಪಟ್ಟಿರುವುದನ್ನು ಕಂಡು ಮಾಲೀಕರು ಕಣ್ಣೀರಿಟ್ಟಿದ್ದಾರೆ. ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಉಮೇಶ್ ಭೇಟಿ ನೀಡಿ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಜೊತೆಗೆ ಕಡೂರು ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ಮಾತನಾಡಿದ ರೈತರು, ನಾವು ಸಣ್ಣ ರೈತರು. ನಮಗಿದ್ದ ಅಲ್ಪ - ಸ್ವಲ್ಪ ಜಮೀನಿನ ಜೊತೆ ಕುರಿ ಸಾಕಣೆ ಮಾಡಿಕೊಂಡು ಬರುತ್ತಿದ್ದೆವು. ಈಗ ನಾವು ಸಾಕಿರುವ ಕುರಿ, ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿದ್ದು, ನಮಗೆ ದಿಕ್ಕೇ ತೋಚದಂತಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಮಂಡ್ಯದಲ್ಲಿ ರೈತನ ಮೇಲೆ ಚಿರತೆ ದಾಳಿ : ರೈತನ ಮೇಲೆ ದಾಳಿ ನಡೆಸಿದ ಚಿರತೆ ಬಳಿಕ ಮೇಕೆ ಹೊತ್ತೊಯ್ದಿದ್ದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿತ್ತು. ಗ್ರಾಮದ ಶಶಿಕುಮಾರ್ ಎಂಬುವವರ ಮೇಲೆ ಚಿರತೆ ದಾಳಿ ನಡೆಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಇದೇ ವೇಳೆ, ಚಿರತೆ ಮೇಕೆಯನ್ನು ಹೊತ್ತೊಯ್ದಿತ್ತು.
ಗುರುವಾರ ಮಧ್ಯಾಹ್ನ ಶಶಿಕುಮಾರ್ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಚಿರತೆ ದಾಳಿ ಮಾಡಿತ್ತು. ಇದರಿಂದ ಕೈಗೆ ಸಣ್ಣ ಮಟ್ಟದ ಗಾಯವಾಗಿತ್ತು. ಚಿರತೆ ದಾಳಿ ಬೆನ್ನಲ್ಲೇ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಅಲ್ಲದೇ ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಒತ್ತಾಯಿಸಿದ್ದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೋನು ಇರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುವುದಾಗಿ ಭರವಸೆ ನೀಡಿದ್ದರು. ಇದಕ್ಕೂ ಮುನ್ನ ತುಮಕೂರಿನಲ್ಲಿ ಶ್ವಾನಗಳನ್ನು ಬೇಟೆಯಾಡಿ ತಿಂದು ಹಾಕುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಸಬಾ ಹೋಬಳಿಯ ಕೆರೆ ಮಲ್ಲೇನಹಳ್ಳಿ ಗ್ರಾಮದಲ್ಲಿ ಸೆರೆ ಹಿಡಿದಿದ್ದರು.
ಇದನ್ನೂ ಓದಿ : ಮೈಸೂರು : ತೋಟದ ತಂತಿ ಬೇಲಿಗೆ ಸಿಲುಕಿದ್ದ ಚಿರತೆ ರಕ್ಷಿಸಿದ ಅರಣ್ಯ ಇಲಾಖೆ