ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭಾನುವಾರ ಸಹ ಧಾರಾಕಾರ ಮಳೆಯಾಗುತ್ತಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಈಗಾಗಲೇ ಜಿಲ್ಲೆಯಾದ್ಯಂತ ಹತ್ತಾರು ಅವಘಡಗಳು ಸಂಭವಿಸಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಶೃಂಗೇರಿ ತಾಲೂಕಿನಲ್ಲಿ ಅತಿ ದೊಡ್ಡ ಅವಘಡ ಜರುಗಿದೆ. ಶೃಂಗೇರಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ದೊಡ್ಡ ಮಟ್ಟದಲ್ಲಿ ಭೂ ಕುಸಿತ ಉಂಟಾಗಿದೆ.
ಶೃಂಗೇರಿ-ಉಡುಪಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಬಂದ್ ಆಗಿದೆ. ರಾಜ್ಯ ಹೆದ್ದಾರಿಯ ರಸ್ತೆಯಲ್ಲಿ 200 ಅಡಿಯಷ್ಟು ಭೂಮಿ ಕುಸಿದು ಹೋಗಿದೆ. ರಸ್ತೆ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಭಾರಿ ಭೂ ಕುಸಿತ ಉಂಟಾಗಿದ್ದು, ಒಂದು ಎಕರೆಗೂ ಅಧಿಕ ಪ್ರದೇಶದಲ್ಲಿ ಭೂಮಿ ಕುಸಿದಿದೆ. ಶೃಂಗೇರಿ ಸಮೀಪದ ನೇರಳಕುಡಿಗೆ ಬಳಿ ಈ ಘಟನೆ ನಡೆದಿದ್ದು, ವಾಹನ ಸವಾರರು ಪರದಾಟ ನಡೆಸುವಂತಾಗಿದೆ.
ರಸ್ತೆ ಕುಸಿತದ ನಡುವೆಯೇ ಮನೆಯ ಮೇಲೆ ಗುಡ್ಡ ಕುಸಿತವಾಗಿದ್ದರಿಂದ ಸಂಪೂರ್ಣ ಹಾನಿಯಾಗಿದೆ. ಈ ಘಟನೆಯು ಶೃಂಗೇರಿ ಸಮೀಪದ ನೇರಲಕುಡಿಗೆ ಗ್ರಾಮದಲ್ಲಿ ನಡೆದಿದೆ. ಮಳೆ ಹೆಚ್ಚಾದಂತೆ ಗುಡ್ಡ ಕುಸಿಯುತ್ತಲೇ ಇದೆ. ಇದರಿಂದ ಸುತ್ತಮುತ್ತಲಿನ ಜನರು ಭಯದಲ್ಲೇ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ಮುಂದುವರಿದ ವರುಣಾರ್ಭಟ.. ಶಿವಮೊಗ್ಗ ಜಿಲ್ಲೆಯಲ್ಲಿ 397 ಮನೆಗಳಿಗೆ ಹಾನಿ, ತಕ್ಷಣ ಪರಿಹಾರಕ್ಕೆ ಸೂಚನೆ