ಚಿಕ್ಕಮಗಳೂರು: ಜಿಲ್ಲೆಯ ಶಾರದ ಪೀಠದಲ್ಲಿ ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಶಾರದ ಮಠದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ವಿಧುಶೇಖರಭಾರತೀ ಸ್ವಾಮಿ ಅವರು ದೀಪೋತ್ಸವಕ್ಕೆ ಚಾಲನೆ ನೀಡಿದರು. ಶಾರದ ಪೀಠ ಮಠದಿಂದ ಮುಖ್ಯ ಬೀದಿಯಲ್ಲಿ ಸಾಗಿ ಮಲಹಾನಿಕರೇಶ್ವರ ದೇವಾಲಯಕ್ಕೆ ಜಗದ್ಗುರು ವಿಧುಶೇಖರಭಾರತೀ ಸ್ವಾಮೀಜಿಗಳು ಮೆರವಣಿಗೆಯಲ್ಲಿ ಸಾಗಿದರು. ದೇವಸ್ಥಾನ ಆವರಣದಲ್ಲಿರುವ ಬೆಟ್ಟದ ಸ್ತಂಭಗಣಪತಿ, ಭವಾನಿ ಅಮ್ಮನವರು ಹಾಗೂ ಮಲಹಾನಿಕರೇಶ್ವರ ಸ್ವಾಮಿಯ ಸನ್ನಿಧಿಗೆ ರಂಗಪೂಜೆ, ಅಷ್ಟವಧನ ಸೇವೆ ಸೇರಿದಂತೆ ವಿಶೇಷಪೂಜೆ ನೆರವೇರಿಸಲಾಯಿತು.
ಮಠದ ಆವರಣದಲ್ಲಿರುವ ಎಲ್ಲಾ ದೇವಾಲಯಗಳು ಹಾಗೂ ಮಠದ ಮುಖ್ಯ ಬೀದಿಯ ಎರಡೂ ಭಾಗದಲ್ಲಿ ಭಕ್ತರು ಸಾವಿರಾರೂ ದೀಪಗಳನ್ನು ಹಚ್ಚಿ ಅಷ್ಟವಧನ ಸೇವೆ, ಮಹಾ ಮಂಗಳಾರತಿ ಪೂಜೆ ನೆರವೇರಿಸಿದರು. ನಂತರ ತುಂಗಾನದಿಯ ದಡಕ್ಕೆ ತೆರಳಿ ಮಲಹಾನಿಕರೇಶ್ವರಸ್ವಾಮಿ, ಶಾರದಾಂಬೆ ಹಾಗೂ ವಿದ್ಯಾಶಂಕರ ಉತ್ಸವ ಮೂರ್ತಿಗಳನ್ನು ತರಲಾಯಿತು.
ಶಾರದ ಪೀಠದಲ್ಲಿರುವ ಶಾರದಾಂಬೆ ಹಾಗೂ ವಿದ್ಯಾಶಂಕರ ಮೂರ್ತಿಗಳಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ ಆರ್ಚಕರಿಂದ ತುಂಗಾ ನದಿಗೆ ಉತ್ತರ ಭಾರತ ಶೈಲಿಯಲ್ಲಿ ಆರತಿ ಮಾಡಿದರು. ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತೀ ಅವರು ತೆಪ್ಪೋತ್ಸವ ಕಾರ್ಯಕ್ರಮವನ್ನು ನೆರವೇರಿಸಿದರು.