ಚಿಕ್ಕಮಗಳೂರು: ಅದು ದಟ್ಟ ಕಾನನದ ಕುಗ್ರಾಮ. ಇರೋದು ಮೂರೇ ಮನೆ. ಮೂರೇ ಜನ. 1980 ರಿಂದಲೂ ಈ ಮೂವರು ಇಲ್ಲೇ ವಾಸ ಮಾಡುತ್ತಿದ್ದಾರೆ. ಇಬ್ಬರು ವೃದ್ಧೆಯರು. ಓರ್ವ ಪುರುಷ ಬಿಟ್ಟರೆ ಮತ್ತೊಬ್ಬ ವ್ಯಕ್ತಿ ಈ ಪ್ರದೇಶದಲ್ಲಿ ಕಾಣಸಿಗಲ್ಲ. ತಾಲೂಕು ಕೇಂದ್ರದಿಂದ 28 ಕಿ.ಮೀ. ದೂರದ ಈ ಊರಿಗೆ ಓಡಾಡೋಕೆ ರಸ್ತೆಯೂ ಇಲ್ಲ. ಕುಡಿಯೋಕೆ ನೀರೂ ಇಲ್ಲ. ವಿದ್ಯುತ್ ಸಂಪರ್ಕವೂ ಇಲ್ಲ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ರಾಷ್ಟ್ರೀಯ ಉದ್ಯಾನವದ ಅಂಚಿನ ಕುನ್ನಿಹಳ್ಳ ಗ್ರಾಮದಲ್ಲಿ ದೇವರಾಜ್, ನಾಗರತ್ನ, ಶ್ಯಾಮಲ ಎಂಬುವರು ಮಾತ್ರ ವಾಸಿಸುತ್ತಿದ್ದಾರೆ. ಕುದುರೆಮುಖ ಕಂಪನಿ ಆರಂಭವಾದಾಗಿನಿಂದಲೂ ಈ ಮೂವರು ಇಲ್ಲೇ ವಾಸವಿದ್ದಾರೆ. ಇವರಿಗೆ ರಸ್ತೆ, ನೀರು, ಕರೆಂಟ್ ಯಾವ ವ್ಯವಸ್ಥೆಯೂ ಇಲ್ಲ. ಸರ್ಕಾರದಿಂದ ಕೊಟ್ಟಿರುವ ಸೋಲಾರ್ ಲೈಟ್ ಇದೆ. ಆದ್ರೆ, ವರ್ಷದ 6 ತಿಂಗಳು ಯಥೇಚ್ಛವಾಗಿ ಮಳೆ ಬೀಳುವ ಕಾರಣ ಸೋಲಾರ್ ಲೈಟ್ ಕೂಡ ಕೈಕೊಡುತ್ತೆ. ಈ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಕಾಟ ಕೂಡ ಹೆಚ್ಚಾಗಿಯೇ ಇದೆ. ಇಲ್ಲಿಂದ ಸ್ಥಳಾಂತರಿಸಿ ಎಂದು ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಈ ಮೂವರು ನಿವಾಸಿಗಳು ಆರೋಪಿಸಿದ್ದಾರೆ.
ಈ ಬಗ್ಗೆ ಗ್ರಾಮದ ನಿವಾಸಿ ದೇವರಾಜ್ ಮಾತನಾಡಿ, ಪ್ರತಿಯೊಂದು ವಸ್ತು ಖರೀದಿ ಮಾಡಲು ಕಳಸಕ್ಕೆ ಬರಬೇಕಾಗುತ್ತದೆ. ರೇಷನ್ ಒಂದು ಕುದುರೆಮುಖದಲ್ಲಿ ಸಿಗುತ್ತೆ. ಅದನ್ನ ಬಿಟ್ಟು ಎಲ್ಲದಕ್ಕೂ ಕಳಸಕ್ಕೆ ಬರಬೇಕಾದ ಪರಿಸ್ಥಿತಿ. ಮನೆ-ಜಾಗ ಎಲ್ಲದಕ್ಕೂ ಹಕ್ಕು ಪತ್ರಗಳಿವೆ. ಮನೆಯಲ್ಲಿ ಜನರಿಗಿಂತ ಜಾಸ್ತಿ ಹಾವು ಕಪ್ಪೆಗಳೇ ಕಾಣಿಸಿಕೊಳ್ಳುತ್ತವೆ. ತಮ್ಮನ್ನು ಬೇರೊಂದು ಸ್ಥಳಕ್ಕೆ ಸ್ಥಳಾಂತರಿಸಲು ಮನವಿ ಮಾಡುತ್ತಲೇ ಇದ್ದರೂ ಇದಕ್ಕೆ ಯಾರು ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇತ್ತೀಚಿಗೆ, ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುಂಬಳಡಿಕೆ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಸರಿಯಾದ ಮೂಲ ಸೌಕರ್ಯಗಳಿಲ್ಲ ಎಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಪತ್ರದ ಮೂಲಕ ಕೋರಿದ್ದರು. ಇದಕ್ಕೆ ಪ್ರಧಾನಿ ಅವರ ಕಚೇರಿಯಿಂದ ಪ್ರತಿಕ್ರಿಯೆಯೂ ದೊರೆತಿತ್ತು. ಕಂಬಳಡಿಕೆ ಗ್ರಾಮದಲ್ಲಿ 70ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ.
ಮತ್ತೊಂದೆಡೆ ಕಳಸ ತಾಲೂಕಿನ ಬಿಳಗಲ್ ಗ್ರಾಮದವರು ಕೂಡ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಗ್ರಾಮಸ್ಥರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಗ್ರಾಮದಲ್ಲಿ 30 ರಿಂದ 35 ಮನೆಗಳಿದ್ದು ಸರಿಯಾದ ನೆಟ್ವರ್ಕ್ ಕೂಡ ಸಿಗದಷ್ಟು ಸಮಸ್ಯೆ ಇಲ್ಲಿದೆ. ಕೂಡಲೇ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮೂಲ ಸೌಕರ್ಯವಿಲ್ಲದ ಕುಗ್ರಾಮ: ಫೋನ್ ಕರೆ ಮಾಡಲು 3 ಕಿ.ಮೀ ನಡೆದು ಬರುತ್ತಿರುವ ಗ್ರಾಮಸ್ಥರು