ಚಿಕ್ಕಮಗಳೂರು: ಶೃಂಗೇರಿಯ ಶಾರದಾ ಪೀಠದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕುಟುಂಬ ಹಮ್ಮಿಕೊಂಡಿರುವ ಚಂಡಿಕಾ ಯಾಗ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಇಂದು ನಾಲ್ಕನೇ ದಿನದ ಚಂಡಿಕಾಯಾಗ ಶೃಂಗೇರಿಯ ಶಾರದಾ ಪೀಠದ ಆವರಣದಲ್ಲಿರುವ ಯಾಗ ಶಾಲೆಯಲ್ಲಿ ನಡೆಯುತ್ತಿದ್ದು ಯಾಗದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೂಡ ಭಾಗವಹಿಸಲಿದ್ದಾರೆ.
ಈಗಾಗಲೇ ನೂರಾರು ಪುರೋಹಿತರು ಯಾಗ ಶಾಲೆಗೆ ಆಗಮಿಸಿದ್ದು ನಾಲ್ಕನೇ ದಿನದ ಯಾಗದ ಸರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಯಾಗ ಶಾಲೆಗೆ ಆಗಮಿಸಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಶಾರದಾಂಬಾ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ನಾಳೆ ಮಂಗಳವಾರ ಯಾಗದ ಪೂರ್ಣಾಹುತಿ ನಡೆಯಲಿದ್ದು ಹೇಚ್.ಡಿ ದೇವೇಗೌಡ ಕುಟುಂಬದ ಎಲ್ಲಾ ಸದಸ್ಯರು ಯಾಗದ ಪೂರ್ಣಹುತಿ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಇಂದು ರಾತ್ರಿ ಶೃಂಗೇರಿಯಲ್ಲಿಯೇ ಕುಮಾರಸ್ವಾಮಿ ವಾಸ್ತವ್ಯ ಹೂಡಿ ನಾಳೆ ಪೂರ್ಣಾವಧಿ ಕಾರ್ಯಕ್ರಮ ಮುಗಿಸಿಕೊಂಡು ಮಂಗಳೂರಿನ ಕಡೆ ಪ್ರಯಾಣ ಬೆಳೆಸಲಿದ್ದಾರೆ.