ಚಿಕ್ಕಮಗಳೂರು: ಮನೆ ಬಳಿ ಬೇಟೆಗಾಗಿ ಹೊಂಚು ಹಾಕಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದಲ್ಲಿ ಈ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ. ಭಕ್ತಿಶ್ ಎಂಬುವರ ತೋಟದಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಬೇಟೆಗಾಗಿ ಕಾದು ಮಲಗಿತ್ತು. ಇದನ್ನು ನೋಡಿದಂತಹ ತೋಟದ ಮಾಲೀಕರು ಕೂಡಲೇ ಉರಗತಜ್ಞ ಆರಿಫ್ ಅವರಿಗೆ ವಿಚಾರ ತಿಳಿಸಿದ್ದಾರೆ.
ವಿಚಾರ ತಿಳಿದ ಕೂಡಲೇ ಆರಿಫ್ ಸ್ಥಳಕ್ಕೆ ಭೇಟಿ ನೀಡಿ 30 ನಿಮಿಷಕ್ಕೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ, ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದರು. ಅತ್ತಿಗೆರೆ ಗ್ರಾಮದಲ್ಲಿ ಹಿಡಿದ ಕಾಳಿಂಗವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆ ಚಾರ್ಮಾಡಿ ಘಾಟ್ನಲ್ಲಿ ಬಿಡಲಾಗಿದ್ದು, ಕಾಳಿಂಗ ಸರ್ಪವನ್ನ ಸೆರೆ ಹಿಡಿದ ವೇಳೆ ಆಹಾರವಿಲ್ಲದೆ ನಿತ್ರಾಣಗೊಂಡಿತ್ತು. ಈ ವೇಳೆ ಆರಿಫ್ ಸರ್ಪಕ್ಕೆ ನೀರನ್ನು ಕುಡಿಸಿ ರಕ್ಷಿಸಿದರು.
ಸಕಲೇಶಪುರದಲ್ಲಿಯೂ ಕಾಳಿಂಗ ಸರ್ಪದ ರಕ್ಷಣೆ
ಸಕಲೇಶಪುರ ತಾಲೂಕಿನ ಕುಂಬರಡಿ ಗ್ರಾಮದಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ಉರಗ ಪ್ರೇಮಿ ಸಗೀರ್ ಅವರು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ತಾಲೂಕಿನ ಹಾನುಬಾಳ್ ಹೋಬಳಿ ಹೆಬ್ಬಸಾಲೆ ಗ್ರಾ. ಪಂ ವ್ಯಾಪ್ತಿಯ ಕುಂಬರಡಿ ಗ್ರಾಮದ ನಿಂಗಪ್ಪ ಎಂಬುವರ ಕಾಫಿ ತೋಟದಲ್ಲಿ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡ ಹಿನ್ನೆಲೆ ಮನೆಯವರು ಆತಂಕಗೊಂಡು ಸ್ಥಳೀಯರ ಸಹಾಯದಿಂದ ಹಾವಿನ ಚಲನವಲನಗಳನ್ನು ಗಮನಿಸಿ ಪಟ್ಟಣದ ಉರಜ ತಜ್ಞ ಸಗೀರ್ ಅವರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕಾಗಮಿಸಿದ ಸಗೀರ್ ಗ್ರಾಮಸ್ಥರುಗಳಾದ ಶಶಿದರ್, ಸುರೇಶ್, ತನುಜ್, ವಿಜಿತ್ ಅವರ ಸಹಾಯದಿಂದ ಹಾವನ್ನು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದರು. ಕಳೆದ ಹಲವಾರು ದಿನಗಳಿಂದ ಸುಮಾರು 11 ಅಡಿ ಉದ್ದದ ಈ ಕಾಳಿಂಗಸರ್ಪ ನಿಂಗಪ್ಪ ಹಾಗು ಅಕ್ಕಪಕ್ಕದ ಕಾಫಿ ತೋಟಗಳಲ್ಲಿ ಸಂಚರಿಸುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಹುಟ್ಟುಹಾಕಿತ್ತು.
ಓದಿ: ಲಾಕ್ಡೌನ್ ಆತಂಕ: ಕಾರವಾರದಲ್ಲಿ ಊರು ಸೇರುತ್ತಿರುವ ಮೀನುಗಾರಿಕಾ ಕಾರ್ಮಿಕರು