ಚಿಕ್ಕಮಗಳೂರು: ಭಾರತೀಯ ಸೇನೆಯ ನೂತನ ಉಪ ಮುಖ್ಯಸ್ಥರಾಗಿ ಕನ್ನಡಿಗರಾದ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ನೇಮಕಗೊಂಡಿದ್ದು, ಮೇ 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ತವರು ಜಿಲ್ಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂತಸ, ಸಡಗರ ಮನೆ ಮಾಡಿದೆ. ಸೇನಾ ಉಪ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ನೂತನ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾದ ಹಿನ್ನೆಲೆ ಅವರಿಂದ ತೆರವಾದ ಸ್ಥಾನಕ್ಕೆ ರಾಜು ಅವರನ್ನು ನೇಮಕ ಮಾಡಲಾಗಿದೆ. ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪದ ಬಗ್ಗವಳ್ಳಿ ಗ್ರಾಮದವರಾಗಿದ್ದಾರೆ.
ದಾವಣಗೆರೆಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿರುವ ಇವರು, ಬಿಜಾಪುರದ ಸೈನಿಕ ಶಾಲೆ ಮತ್ತು ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಟ್ರೈನಿಂಗ್ ಪಡೆದು ಸೇನಾ ಜೀವನ ಆರಂಭಿಸಿದರು. ಇವರಿಗೆ ಈವರೆಗೆ ಹತ್ತು ಹಲವು ಪ್ರಶಸ್ತಿಗಳು ಲಭಿಸಿದ್ದು, ಅದರಲ್ಲಿ ಪ್ರಮುಖವಾಗಿ ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಯುದ್ಧ ಸೇವಾ ಪದಕ, ಜನರಲ್ ಆಫೀಸರ್, ಕಮಾಂಡಿಂಗ್-ಇನ್-ಚೀಫ್, ಸೌತ್ ವೆಸ್ಟರ್ನ್ ಕಮಾಂಡ್ ಕಮೆಂಡೇಶನ್ ಕಾರ್ಡ್ನಂತಹ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಪರಿಚಯ: ಲೆಫ್ಟಿನೆಂಟ್ ಜನರಲ್ ರಾಜು ಬಗ್ಗವಳ್ಳಿ ಗ್ರಾಮದದಲ್ಲಿ 1963ರ ಅಕ್ಟೋಬರ್ 19ರಂದು ಜನಿಸಿದ್ದು, ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜ್, ವೆಲ್ಲಿಂಗ್ಟನ್ ಮತ್ತು ಯುನೈಟೆಡ್ ಕಿಂಗ್‌ಡಂನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‌ನಲ್ಲಿ ಪದವಿ ಪಡೆದಿದ್ದಾರೆ. ಕ್ಯಾಲಿಫೋರ್ನಿಯಾದ ಮಾಂಟೆರೆಯಲ್ಲಿ ನೌಕಾಪಡೆಯ ಸ್ನಾತಕೋತ್ತರ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಭಯೋತ್ಪಾದನೆ ನಿಗ್ರಹದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ.
1984ರಲ್ಲಿ ಜಾಟ್ ರೆಜಿಮೆಂಟ್ನ 11ನೇ ಬೆಟಾಲಿಯನ್ಗೆ ನಿಯೋಜಿನೆಗೊಂಡು ಸೇವೆ ಸಲ್ಲಿಸಿದ್ದಾರೆ. ನಂತರ ಜಾಟ್ ರೆಜಿಮೆಂಟ್ನ 15ನೇ ಬೆಟಾಲಿಯನ್ಗೆ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಐದು ವರ್ಷಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದರಿಂದ ಆ ಭಾಗದ ಬಗ್ಗೆ ಸಾಕಷ್ಟು ಅನುಭವ ಹೊಂದಿದ್ದಾರೆ. ಚಿನಾರ್ ಕಾರ್ಪ್ಸ್ನ 49ನೇ ಕಮಾಂಡರ್ ಆಗಿ 2021ರ ಮಾರ್ಚ್ 17ರವರೆಗೆ ಸೇವೆ ಸಲ್ಲಿಸಿದ್ದರು. 15ನೇ ಚಿನಾರ್ ಕೋರ್ನ ಜನರಲ್ ಕಮಾಂಡಿಂಗ್ ಅಫೀಸರ್ ಆಗಿ ಸಹ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಭೂ ಸೇನಾ ಮುಖ್ಯಸ್ಥರಾಗಿ ಜನರಲ್ ಮನೋಜ್ ಪಾಂಡೆ ಅಧಿಕಾರ ಸ್ವೀಕಾರ