ಚಿಕ್ಕಮಗಳೂರು: ಕಾಫಿನಾಡಲ್ಲಿ 67ನೇ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ನಗರದ ಸುಭಾಷ್ ಚಂದ್ರ ಬೋಸ್ ಮೈದಾನದಲ್ಲಿ ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣಕ್ಕೂ ಮುನ್ನ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಗಿದೆ. ಶಾಸಕ ಸಿ.ಟಿ ರವಿ, ಎಂ.ಎಲ್.ಸಿ ಪ್ರಾಣೇಶ್ ಸೇರಿದಂತೆ ಹಲವರು ಭಾಗಿ ಆಗಿದ್ದು, ಪೊಲೀಸ್, ಗೃಹರಕ್ಷಕ ದಳ ಹಾಗೂ ವಿಧ್ಯಾರ್ಥಿಗಳಿಂದ ಪಥ ಸಂಚಲನ ನಡೆದಿದೆ. ಪಥ ಸಂಚಲನದಲ್ಲಿ ಕಂಸಾಳೆ, ಡೊಳ್ಳು, ಛಂಡೇ ವಾದ್ಯ, ವೀರಗಾಸೆ, ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡಲಾಗಿತ್ತು.
ಇದೇ ಸಂದರ್ಭದಲ್ಲಿ ಮಲೆನಾಡಿನಲ್ಲಿ ಕೂಲಿ ಕಾರ್ಮಿಕರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ರಾಜ್ಯೋತ್ಸವದ ವೇದಿಕೆಯತ್ತ ಪ್ರತಿಭಟನಾಕಾರರು ನುಗ್ಗಲು ಯತ್ನ ನಡೆಸಿದ್ದಾರೆ.
ಕೂಲಿ ಕಾರ್ಮಿಕರ ಮೇಲೆ ಹಲ್ಲೆ, ದೌರ್ಜನ್ಯ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡ ರಾಜ್ಯೋತ್ಸವದ ಮೆರವಣಿಗೆ ವೇಳೆಯೂ ಹಲವರ ಬಂಧನವಾಗಿದೆ. ಮತ್ತೆ ವೇದಿಕೆಗೆ ನುಗ್ಗಲು ಯತ್ನಿಸಿದ ದಲಿತಪರ ಸಂಘಟನೆಯ ಮುಖಂಡರ ಬಂಧನವಾಗಿದ್ದು, ಜಿಲ್ಲಾಡಳಿತ, ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಅಸಮಾಧಾನ ಹೊರ ಹಾಕಿದ್ದಾರೆ. ವೇದಿಕೆಯತ್ತ ನುಗ್ಗಲು ಯತ್ನಿಸಿದವರನ್ನು ಜೀಪಿಗೆ ತುಂಬಿ ಪೊಲೀಸರು ಕರೆದುಕೊಂಡು ಹೋದ ಘಟನೆಯು ನಡೆದಿದೆ.
ಓದಿ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ: ವಿಧಾನಸೌಧ ಸುತ್ತಮುತ್ತ ಬಿಗಿ ಭದ್ರತೆ