ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಮಲೆನಾಡು ಭಾಗದಲ್ಲಿ ಜೀಪ್ ಱಲಿ ನಡೆಯಿತು. ಅಡಿಕೆ ತೋಟ, ಕಾಡಿನೊಳಗೆ ಜೀಪ್‌ಗಳು ಮುನ್ನುಗ್ಗಿದವು.
ಮಳೆ ಕೊಂಚ ಬಿಡುವು ನೀಡುತ್ತಿದ್ದಂತೆ, ಇಲ್ಲಿನ ಕೊಪ್ಪ ಸ್ಪೋಟ್ಸ್ ಕ್ಲಬ್ನಿಂದ ನಾಲ್ಕು ಚಕ್ರದ ವಾಹನಗಳ ಕೆ.ಆರ್. ಆರವಿಂದ್ ಆಫ್ ಬೀಟ್ ಡ್ರೈವ್ 2020 ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಿರೇಕೊಡಿಗೆಯ ದೊರಗಲ್ಲು, ಕೊಕ್ಕೊಡು, ಬಾಳೆಗದ್ದೆ, ಕಿರಣಕೆರೆ, ಚಾವಲ್ಮನೆ ಪ್ರದೇಶಗಳಲ್ಲಿನ ಹಳ್ಳ, ಕಾಡು, ಅಡಿಕೆ ತೋಟಗಳಲ್ಲಿ ಈ ಱಲಿ ನಡೆಯಿತು.
ಈ ಱಲಿಯಲ್ಲಿ 100ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, ಈ ಱಲಿಗೆ ಅನುಗುಣವಾಗಿ ಹೊಸದೊಂದು ಮಾರ್ಗವನ್ನು ನಿರ್ಮಾಣ ಮಾಡಲಾಗಿತ್ತು. ಹೊಂಡ, ಗುಂಡಿ, ದಿಬ್ಬ, ಹಳ್ಳಗಳಲ್ಲಿಯೂ ಸಹ ಸವಾಲೊಡ್ಡುವಂತಹ ಮಾರ್ಗದಲ್ಲಿ ವಾಹನಗಳು ಸಾಗಿದವು.
ಈ ಱಲಿಯಲ್ಲಿ ಮಂಗಳೂರು, ಚಿಕ್ಕಮಗಳೂರು, ಬೆಂಗಳೂರು, ಹಾಸನ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 50ಕ್ಕೂ ಹೆಚ್ಚು ವಾಹನಗಳಲ್ಲಿ ರೇಸ್ ಪ್ರಿಯರು ಭಾಗವಹಿಸಿದ್ದರು.
ಕಾಡು, ಹಳ್ಳಗಳಲ್ಲಿ ಕೆಲವು ವಾಹನಗಳು ಸವಾಲನ್ನು ಸ್ವೀಕರಿಸಲಾಗದೇ ಮಾರ್ಗ ಮಧ್ಯೆಯಲ್ಲಿ ಸಿಕ್ಕಿಬಿದ್ದ ದೃಶ್ಯಗಳು ಕಂಡುಬಂದವು. ಈ ವೇಳೆ ಟ್ರ್ಯಾಕ್ಟರ್ ಹಾಗೂ ಜೆಸಿಬಿಯ ಸಹಾಯದ ಮೂಲಕ ವಾಹನಗಳನ್ನು ಕೆಸರಿನ ಗುಂಡಿಯಿಂದ ಹೊರ ತರಲಾಯಿತು.
ಕಾಡಿನೊಳಗೆ ವಾಹನಗಳ ಶಬ್ದಗಳು ಹಾಗೂ ಜೀಪ್ ಚಾಲಕರ ಸಾಹಸ ಪ್ರರ್ದಶಿಸುವ ರೈಡಿಂಗ್ ಸ್ಥಳೀಯರಿಗೆ ರೋಮಾಂಚನ ನೀಡಿತು.
ಸ್ವರ್ಧೆಯಲ್ಲಿ ಮಹಿಳೆಯರು ಕುಟುಂಬ ಸಮೇತವಾಗಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಈ ಱಲಿಯಲ್ಲಿ ಸ್ಥಳೀಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.