ಬೆಂಗಳೂರು: ಆದಾಯಕ್ಕೆ ಪ್ರತಿಯಾಗಿ ತೆರಿಗೆ ಪಾವತಿಸದ ಆರೋಪ ಹಿನ್ನೆಲೆಯಲ್ಲಿ ಡೋಲೋ 650 ಮಾತ್ರೆ ತಯಾರಿಕಾ ಮೈಕ್ರೋ ಲ್ಯಾಬ್ಸ್ ಕಂಪನಿ ಪ್ರಧಾನ ಕಚೇರಿ ಸೇರಿದಂತೆ ದೇಶದ 40 ಕಡೆಗಳಲ್ಲಿ ಕರ್ನಾಟಕ ಹಾಗೂ ಗೋವಾ ವಿಭಾಗದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ರೇಸ್ ಕೋರ್ಸ್ನಲ್ಲಿರುವ ಪ್ರಧಾನ ಕಚೇರಿ ಮೈಕ್ರೋ ಲ್ಯಾಬ್ಸ್ ಕಂಪನಿ, ತಮಿಳುನಾಡು, ಗೋವಾ, ಪಂಜಾಬ್, ಮುಂಬೈ, ದೆಹಲಿ ಹಾಗೂ ಸಿಕ್ಕೀಂ ಸೇರಿದಂತೆ ದೇಶದ 40 ಕಡೆಗಳಲ್ಲಿ 200ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ. ಕಂಪನಿ ಸಿಎಂಡಿ ದಿಲೀಪ್ ಸುರಾನಾ, ಡೈರೆಕ್ಟರ್ ಆನಂದ್ ಸುರಾನ ನಿವಾಸದ ಮೇಲೆ ದಾಳಿ ನಡೆಸಿ, ಸಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಕೊರೊನಾ ಸಂದರ್ಭದಲ್ಲಿ ಬಹುಬೇಡಿಕೆಯ ಮಾತ್ರೆಗಳ ಪೈಕಿ ಡೋಲೋ 650 ಮಾತ್ರೆ ಹೆಚ್ಚು ಮಾರಾಟವಾಗಿತ್ತು. ಸುಮಾರು 350 ಕೋಟಿ ಡೋಲೋ ಮಾತ್ರೆಗಳ ಮಾರಾಟದಿಂದ ಮೈಕ್ರೋ ಲ್ಯಾಬ್ಸ್ ಕಂಪನಿ 570 ಕೋಟಿ ರೂಪಾಯಿ ಆದಾಯ ಗಳಿಸಿತ್ತು ಎನ್ನಲಾಗುತ್ತಿದೆ. ಆದಾಯಕ್ಕೆ ಪ್ರತಿಯಾಗಿ ತೆರಿಗೆ ಪಾವತಿಸಿರಲಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಗುರೂಜಿ ಒಳ್ಳೆಯವರಿದ್ದರು, ನನ್ನ ಗಂಡ ಕೊಲೆ ಮಾಡಿದ್ದೇಕೊ? ವನಜಾಕ್ಷಿ ಶಿರೂರ ಮಾತು