ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಬಡ್ಡಿ ರಹಿತ ಸಾಲದ ಯೋಜನೆಯನ್ನು ಹಾಕಿಕೊಂಡಿದೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಧರ್ಮೇಗೌಡ ತಿಳಿಸಿದರು.
ಜಿಲ್ಲೆಯಲ್ಲಿ ಬರುವ ಎಲ್ಲಾ ತಾಲೂಕುಗಳಿಂದ ಒಟ್ಟು 80 ಕೋಟಿಗೂ ಅಧಿಕ ಬೆಳೆ ಸಾಲ ನೀಡಲು ಬ್ಯಾಂಕ್ ವತಿಯಿಂದ ಯೋಜನೆ ರೂಪಿಸಿದ್ದು, 20,000ಕ್ಕೂ ಅಧಿಕ ರೈತರು ಈಗಾಗಲೇ ಅರ್ಜಿ ಹಾಕಿದ್ದಾರೆ. ಈಗಾಗಲೇ ಎಲ್ಲಾ ಸಾಲವನ್ನು ಮಂಜೂರಾತಿ ಮಾಡಿದ್ದು, ವಿತರಣೆ ಮಾಡುವ ಹಂತದಲ್ಲಿದ್ದೇವೆ ಎಂದರು.
3 ಲಕ್ಷದವರೆಗೆ ಬಡ್ಡಿ ರಹಿತ ಸಾಲ: 50,000 ಹಾಗೂ 25,000 ಸಾವಿರ ಸಾಲ ಪಡೆದ ರೈತರು ಇನ್ನೂ ಹೆಚ್ಚಿನ ಪ್ರಾಪರ್ಟಿ ನೀಡಿದರೆ ಸುಮಾರು 2 ಲಕ್ಷದವರೆಗೂ ಬ್ಯಾಂಕ್ ವತಿಯಿಂದ ಸಾಲವನ್ನು ನೀಡಲಾಗುತ್ತದೆ. ಹೊಸ ಸಾಲಕ್ಕೆ 23 ಸಾವಿರಕ್ಕೂ ಅಧಿಕ ರೈತರು ಅರ್ಜಿ ಹಾಕಿದ್ದು, 3 ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ಓರ್ವ ರೈತನಿಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಜಮೀನು ಅಭಿವೃದ್ಧಿಗಾಗಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೂ ಸಾಲವನ್ನು ನೀಡಲು 110 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಇದು ಮುಂದಿನ ಎರಡು ತಿಂಗಳಿನಲ್ಲಿ ರೈತರ ಮನೆಯ ಬಾಗಿಲಿಗೆ ತಲುಪಲಿದೆ ಎಂದು ವಿವರಿಸಿದರು.