ಚಿಕ್ಕಮಗಳೂರು: ಹೊರವಲಯದ ಅಂಬಳೆ ಗ್ರಾಮದ ಪಕ್ಕದಲ್ಲಿರುವ ಕೈಗಾರಿಕಾ ಪ್ರದೇಶಕ್ಕೆ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೋವಿಡ್-19 ಬಂದ ನಂತರ ಕೈಗಾರಿಕಾ ವಲಯದ ಮೇಲೆ ಯಾವ ರೀತಿ ಪರಿಣಾಮ ಬೀರಿದೆ? ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ? ಎಂಬುದರ ಕುರಿತು ಕೈಗಾರಿಕೋದ್ಯಮಿಗಳ ಜೊತೆ ಚರ್ಚೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಖಾಸಗಿ ಹೋಮ್ ಸ್ಟೇನಲ್ಲಿ ರಾಜಕೀಯದ ಕುರಿತಾಗಿ ಚರ್ಚಿಸಿಲ್ಲ. ನಿನ್ನೆ ಶಿವಮೊಗ್ಗದಲ್ಲಿ ಈಶ್ವರಪ್ಪ ಅವರು ಸಿಕ್ಕಿದ್ದರು. ಕೆಲ ಸಚಿವರು ಪ್ರವಾಸದಲ್ಲಿದ್ದೇವೆ. ಮಾಧ್ಯಮದವರಿಗೆ ನಾವು ಪ್ರವಾಸ ಮಾಡಿದರೂ ತಪ್ಪೇ, ಮಾಡದಿದ್ದರೂ ತಪ್ಪೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾತ್ರಿ ಖಾಸಗಿ ಹೋಮ್ಸ್ಟೇನಲ್ಲಿ ಜಗದೀಶ್ ಶೆಟ್ಟರ್, ಸಿ.ಟಿ.ರವಿ, ಈಶ್ವರಪ್ಪ, ಆರ್.ಅಶೋಕ್ ಅವರು ಸೇರಿ ಮಹತ್ವದ ರಾಜಕೀಯ ಕುರಿತು ಚರ್ಚಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿ, ಮಾಧ್ಯಮದವರಿಗೆ ತಪ್ಪು ಮಾಹಿತಿ ಸಿಕ್ಕಿದೆ. ಜಗದೀಶ್ ಶೆಟ್ಟರ್ ಅವರು ನೇರವಾಗಿ ಚಿಕ್ಕಮಗಳೂರು ನಗರಕ್ಕೆ ಬಂದಿದ್ದಾರೆ. ಆರ್.ಅಶೋಕ್ ಅವರು ಅವರ ಪಾಡಿಗೆ ಇದ್ದಾರೆ. ಕಲ್ಪಿತ ಸುದ್ದಿಗಳನ್ನು ನೀವೇ ಬಿತ್ತುತ್ತಿದ್ದೀರಿ. ನಾನು ಮನೆಯಲ್ಲಿದ್ದೆ. ಅವರು ಖಾಸಗಿ ಹೋಟೆಲ್ನಲ್ಲಿದ್ದರು. ಇವೆಲ್ಲ ಕಲ್ಪಿತ ಸುದ್ದಿಗಳು. ಇಲ್ಲದಿರುವ ಸುದ್ದಿಗಳಿಗೆ ಹೇಗೆ ಉತ್ತರಿಸಲಿ ಎಂದರು.