ಚಿಕ್ಕಮಗಳೂರು : ಕಳೆದ ಕೆಲ ದಿನಗಳ ಹಿಂದೆ ವಿಧಾನಪರಿಷತ್ನಲ್ಲಿ ನಡೆದ ಘಟನೆ ಅವರ ಮನಸ್ಸಿಗೆ ತುಂಬಾ ನೋವುಂಟು ಮಾಡಿತ್ತು. ನಾನೂ ಕೂಡ ಅವರಿಗೆ ಸಮಾಧಾನ ಮಾಡಿದ್ದೆ ಎಂದು ಧರ್ಮೇಗೌಡರ ಸಹೋದರ, ಜೆಡಿಎಸ್ ಎಂಎಲ್‌ಸಿ ಎಸ್ ಎಲ್ ಬೋಜೇಗೌಡ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಸ್ ಎಲ್ ಬೋಜೇಗೌಡ ಅವರು, ನಿನ್ನೆ ನಡೆದ ಸಮಾರಂಭದಲ್ಲಿ ಇಬ್ಬರೂ ಜೊತೆಗಿದ್ದೆವು. ಅದಾದ ನಂತರ ನಾನು ಅವರ ಜೊತೆ ಸಂಪರ್ಕಕ್ಕೆ ಹೋಗಿಲ್ಲ. ಅವರು ಪ್ರತಿನಿತ್ಯ ನನ್ನ ಜೊತೆ ಫೋನ್ನಲ್ಲಿ ಮಾತನಾಡುತ್ತಿದ್ದರು. ಕಳೆದ ಕೆಲ ದಿನಗಳ ಹಿಂದೆ ವಿಧಾನಪರಿಷತ್ನಲ್ಲಿ ಆದ ಘಟನೆ ಅವರ ಮನಸ್ಸಿಗೆ ತುಂಬಾ ನೋವುಂಟು ಮಾಡಿತ್ತು.
ನಾನೂ ಕೂಡ ಅವರಿಗೆ ಸಮಾಧಾನ ಮಾಡಿದ್ದೆ. ಕುಟುಂಬದಲ್ಲಿ ಎಲ್ಲಾ ಸದಸ್ಯರು ಅನ್ಯೋನ್ಯವಾಗಿದ್ದರು. ಅವರಿಗೆ ಯಾವುದೇ ಸಮಸ್ಯೆಯಿರಲಿಲ್ಲ. ಆದರೆ, ಡೆತ್ನೋಟ್ನಲ್ಲಿ ಏನು ಬರೆದಿದ್ದಾರೆ ಎಂಬುದು ನನಗೂ ಸಹ ತಿಳಿದಿಲ್ಲ ಎಂದರು.
ಓದಿ: ಧರ್ಮೇಗೌಡರ ಸ್ವ ಗ್ರಾಮದ ತೋಟದ ಮನೆಯಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ
ಸಖರಾಯಪಟ್ಟಣದ ಸರಪನಹಳ್ಳಿಯಲ್ಲಿರುವ ಅವರ ತೋಟದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆವರೆಗೆ ಧರ್ಮೇಗೌಡರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಸಖರಾಯಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂತಿಮ ದರ್ಶನ ಪಡೆದ ನಂತರ ಸಖರಾಯಪಟ್ಟಣದ ಸರಪನಹಳ್ಳಿಯಲ್ಲಿರುವ ಅವರ ತೋಟದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.