ಚಿಕ್ಕಮಗಳೂರು: ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದವನು, ಇದರಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷಕ್ಕಾಗಿ ನನ್ನ ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ಧನಾಗಿದ್ದೇನೆ ಎಂದು ಸಚಿವ ಸಿ.ಟಿ. ರವಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಘಟನೆ ಮತ್ತು ಸರ್ಕಾರ ಇವರೆಡರಲ್ಲಿ ನನ್ನ ಆದ್ಯತೆ ಸಂಘಟನೆಗೆ ಎಂಬುದನ್ನು ವರಿಷ್ಠರಿಗೆ ಹೇಳಿದ್ದೇನೆ. ಯಾವ ಕಾರಣಕ್ಕಾಗಿ ಎಂಬುದನ್ನು ಅವರ ಬಳಿ ಸ್ಪಷ್ಟಪಡಿಸಿದ್ದೇನೆ. ಈ ಕುರಿತು ತೀರ್ಮಾನ ಮಾಡಬೇಕಾಗಿರುವುದು ಪಕ್ಷದ ವರಿಷ್ಠರು. ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬಂದಿರುವುದರಿಂದ, ನನಗೆ ಯಾವುದೇ ರೀತಿಯ ಗೊಂದಲವಿಲ್ಲ ಎಂದರು.
ಒಂದು ವರ್ಷ ಸಚಿವನಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇನೆ. ನನ್ನ ಜಿಲ್ಲೆ ಹಾಗೂ ನನ್ನ ಕ್ಷೇತ್ರಕ್ಕೆ ಏನೆಲ್ಲ ಕೆಲಸ ಮಾಡಬೇಕೋ ಎಲ್ಲವನ್ನು ನಾನು ಮಾಡುತ್ತೇನೆ. ಸರ್ಕಾರ ಸುಗಮವಾಗಿ ಮುಂದುವರೆಯಲು ನನ್ನ ಸಹಕಾರ ಯಾವಾಗಲೂ ಇರುತ್ತದೆ ಎಂದು ಅವರು ತಿಳಿಸಿದರು.
ಈಗಾಗಲೇ ನನ್ನ ರಾಜೀನಾಮೆ ಪತ್ರವನ್ನು ಟೈಪ್ ಮಾಡಿ ಇಟ್ಟಿದ್ದೇನೆ. 1ನೇ ತಾರೀಕು ಕ್ಯಾಬಿನೆಟ್ ಸಭೆ ಇದೆ. 2ನೇ ತಾರೀಕು ಗಾಂಧೀ ಜಯಂತಿ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಿ, ನಂತರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದರು.