ಚಿಕ್ಕಮಗಳೂರು: ಧಾರಾಕಾರ ಮಳೆಯಿಂದ, ಮನೆಯ ಗೋಡೆ ಕುಸಿದು ಬಿದ್ದಿರುವ ಘಟನೆ ಚಿಕ್ಕಮಗಳೂರು ನಗರದ ಹೊರವಲಯದ ಹಿರೇಮಗಳೂರಿನಲ್ಲಿ ನಡೆದಿದೆ.
ನಿರಂತರ ಸುರಿಯುತ್ತಿರುವ ಮಳೆಯಿಂದ ಹಿರೇಮಗಳೂರಿನ ಲಿಂಗಾಯಿತರ ಬೀದಿಯ ಮೂಲೆ ಮನೆ ಹಟ್ಟಿಯಲ್ಲಿರುವ ಲಕ್ಷ್ಮಣ ಅವರ ವಾಸದ ಮನೆಯ ಗೋಡೆ ಕುಸಿದು ಪೂರ್ಣ ಜಖಂಗೊಂಡಿದೆ.
ಕಳೆದ ಶುಕ್ರವಾರವಷ್ಟೇ ಲಕ್ಷ್ಮಣ ಅವರ ಪತ್ನಿ ಲಕ್ಷ್ಮಮ್ಮ ನಿಧನರಾಗಿದ್ದು, ಈಗ ಮನೆಯ ಗೋಡೆ ಪೂರ್ಣ ಕುಸಿದಿರುವುದು ಗಾಯದ ಮೇಲೆ ಮತ್ತೆ ಬರೆ ಎಳೆದಂತಾಗಿದೆ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಲಕ್ಷ್ಮಣ ಮತ್ತು ಅವರ ಪುತ್ರಿ, ಪುತ್ರ ಬೀದಿಗೆ ಬಿದ್ದಿದ್ದಾರೆ.
ಆಶ್ರಯ ಕಳೆದುಕೊಂಡಿರುವ ಲಕ್ಷ್ಮಣ ಕುಟುಂಬಕ್ಕೆ ಹೊಸ ಮನೆ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.