ಚಿಕ್ಕಮಗಳೂರು: ಸಮಯ ಬಂದರೆ ದತ್ತಮಾಲೆ ಹಾಕುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿರುವುದಕ್ಕೆ ಹಿಂದೂಪರ ಸಂಘಟನೆಗಳು ಹರ್ಷ ವ್ಯಕ್ತಪಡಿಸಿವೆ. ಈ ಹಿಂದೆ ದತ್ತಮಾಲೆ ವಿರುದ್ಧ ಕುಮಾರಸ್ವಾಮಿ ಮಾತನಾಡಿದ್ದರು.
ನಮ್ಮ ಧರ್ಮದ ಧರ್ಮಾಭಿಮಾನಕ್ಕೆ ನಾನು ಭಯಪಡುತ್ತೀನಾ? ಕಾನೂನು ಬಾಹಿರವಾಗಿ ಯಾವುದನ್ನೂ ಮಾಡುವುದಿಲ್ಲ. ನಮ್ಮ ಸಂಸ್ಕೃತಿ ಉಳಿಸಲು ಕಾನೂನಾತ್ಮಕವಾಗಿ ಏನು ಬೇಕಾದರೂ ಮಾಡುತ್ತೇನೆ ಎಂದು ಹೆಚ್‌ಡಿಕೆ ಹೇಳಿದ್ದರು. ಡಿಸೆಂಬರ್ 17ರಿಂದ 26ರವರೆಗೆ ನಡೆಯುವ ದತ್ತಮಾಲೆ ಅಭಿಯಾನದ ವೇಳೆ ಹೆಚ್‌ಡಿಕೆ ಮಾಲೆ ಧರಿಸಿ ದತ್ತಪೀಠಕ್ಕೆ ಬರುವ ಸಾಧ್ಯತೆಗಳಿವೆ.
ಭಜರಂಗದಳದ ಮುಖಂಡರಾದ ರಘು ಸಕಲೇಪುರ ಮಾತನಾಡಿ, "ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಬರುತ್ತೇನೆ ಎಂದು ಹೇಳಿರುವುದು ಸ್ವಾಗತಾರ್ಹ. ಡಿ.26ರಂದು ನಡೆಯುವ ದತ್ತ ಜಯಂತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ಇವತ್ತು ಸಾರ್ವಜನಿಕರಿಗೆ ದತ್ತ ಪೀಠ ಮುಕ್ತವಾಗುವಂತ ಸಂದರ್ಭ ಬಂದಿದೆ. ಕುಮಾರಸ್ವಾಮಿ ಮಾಲೆ ಹಾಕಿಕೊಂಡು ಬಂದು ದತ್ತಪಾದುಕೆ ದರ್ಶನ ಪಡೆದು ಸಾರ್ವಜನಿಕರಿಗೆ ಒಂದು ಮಹತ್ವದ ಸಂದೇಶ ನೀಡಲಿ. ಅವರ ಮುಂದಿನ ರಾಜಕೀಯ ಭವಿಷ್ಯ ಉಜ್ವಲ ವಾಗಿರಲಿ ಎಂದು ಪೂಜೆ ಸಲ್ಲಿಸಲಿ" ಎಂದು ಹೇಳಿದರು.
ಇದನ್ನೂ ಓದಿ: ಸಮಯ ಬಂದರೆ ದತ್ತಮಾಲೆ ಹಾಕುತ್ತೇನೆ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ