ಚಿಕ್ಕಮಗಳೂರು: ದತ್ತಪೀಠದಲ್ಲಿ ಹೋಮ-ಹವನ ನಡೆಯುವ ಜಾಗದಲ್ಲಿ ಸಮುದಾಯವೊಂದರ ಜನ ಮಾಂಸಾಹಾರ ಸೇವನೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ವಿಡಿಯೋವೊಂದು ವೈರಲ್ ಕೂಡಾ ಆಗಿದೆ. ವಿವಾದಿತ ಜಾಗದಲ್ಲಿ ಕೋರ್ಟ್ ಆದೇಶ ಉಲ್ಲಂಘನೆ ಆಗಿದೆ ಎನ್ನಲಾಗುತ್ತಿದ್ದು, ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ
ದತ್ತಪೀಠದಲ್ಲಿನ ಹೋಮ - ಹವನ ನಡೆಯುವ ತಾತ್ಕಾಲಿಕ ಶೆಡ್ನಲ್ಲಿ ಮಾಂಸಾಹಾರ ಸೇವನೆ ಮಾಡಲಾಗಿದೆ. ಹೋಮ, ಹವನ ನಡೆಯುವ ಸ್ಥಳದಲ್ಲೇ ಮಾಂಸದೂಟ ಮಾಡಿ, ಪೂಜೆ ಮಾಡಲಾಗಿದೆ ಎಂದು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೇ, ಹಿಂದೂಪರ ಸಂಘಟನೆ ಮುಖಂಡರು ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಈ ವೇಳೆ ಬಜರಂಗದಳದ ಪ್ರಾಂತ್ಯ ಸಂಚಾಲಕ ರಘು ಸಕಲೇಶಪುರ ಮಾತನಾಡಿ, ಮಾಂಸ ಬೇಯಿಸುವ ಮೂಲಕ ದತ್ತಪೀಠ ಅಪವಿತ್ರ ಆಗಿದೆ. ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ, ಬೇರೆ ಸಮಯದಲ್ಲಿ ಮಾಂಸದ ಹೊಗೆ ಬರುತ್ತಿದೆ. ಮುಂದಿನ ದತ್ತ ಜಯಂತಿಯ ಹೋಮವನ್ನು ತಾತ್ಕಾಲಿಕ ಶೆಡ್ನಲ್ಲಿ ಮಾಡುವುದಿಲ್ಲ. ಗುಹೆ ಸಮೀಪದ ತುಳಸಿಕಟ್ಟೆ ಬಳಿ ಹೋಮ ಮಾಡುತ್ತೇವೆ ಎಂದರು.
ನಂತರ ದತ್ತಪೀಠದಲ್ಲಿ ವಿವಾದಿತ ಜಾಗದಲ್ಲಿ ಪೂಜೆ ಮಾಡಿರುವವರ ವಿರುದ್ದ ಪ್ರಕರಣ ದಾಖಲಿಸಬೇಕು. ಮುಂದಿನ ದತ್ತ ಜಯಂತಿಯಲ್ಲಿ ನಿಷೇಧಿತ ಜಾಗದ ಗುಹೆ ಬಳಿಯೇ ಹೋಮಕ್ಕೆ ಅವಕಾಶ ನೀಡಬೇಕು. ಈ ಬಗ್ಗೆ ಯಾವುದೇ ವಿರೋಧ ಎದುರಿಸಲು ಬಜರಂಗದಳ ಸನ್ನದ್ಧವಾಗಿದೆ. ಇಲ್ಲಿ ಕೋರ್ಟ್ ಆದೇಶ ಉಲ್ಲಂಘನೆ ಆಗಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ರಘು ಸಕಲೇಶಪುರ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ದತ್ತಪೀಠದಲ್ಲಿ ಮಾಂಸಾಹಾರ ಸೇವನೆ ಅಕ್ಷಮ್ಯ ಅಪರಾಧ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು: ಸಿ.ಟಿ. ರವಿ ಆಗ್ರಹ