ಚಿಕ್ಕಮಗಳೂರು/ಶಿವಮೊಗ್ಗ: ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದೆ.
ಚಿಕ್ಕಮಗಳೂರು ನಗರದಲ್ಲಿ ಸೋಮವಾರ ಬೆಳಗ್ಗೆಯಿಂದಲೂ ಬಿಡುವು ನೀಡಿದ್ದ ವರುಣ ಸಂಜೆ ವೇಳೆಗೆ ಮತ್ತೆ ಅಬ್ಬರಿಸಿದ್ದಾನೆ.
ಕಳೆದ ಎರಡು ದಿನಗಳ ಕಾಲ ನಗರದಲ್ಲಿ ಮಳೆ ಬಿಡುವು ನೀಡಿದ್ದ ಮಳೆ, ಸಂಜೆ ವೇಳೆಗೆ ಮತ್ತೆ ಪ್ರಾರಂಭವಾಗಿದೆ. ಜಿಲ್ಲೆಯ ಮಲೆನಾಡು ಭಾಗ ಹಾಗೂ ಘಟ್ಟ ಪ್ರದೇಶದ ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಅದೇ ರೀತಿ ಕೆಳಗುರೂ, ಮೂಡಿಗೆರೆ, ಚಾರ್ಮಾಡಿ ಘಾಟಿ, ಬಣಕಲ್, ಕೊಟ್ಟಿಗೆಹಾರ, ಕೊಪ್ಪ, ಬಾಳೆಹೊನ್ನೂರು, ಎನ್ ಆರ್ ಪುರ ಸೇರಿದಂತೆ ಹಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದೆ.
ನಿರಂತರ ಮಳೆ ಹಿನ್ನಲೆ ನಗರ ಹಾಗೂ ಮಲೆನಾಡು ಭಾಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ಕೆಲ ಬಡಾವಣೆಗಳಲ್ಲಿ ಹಾಗೂ ಹಳ್ಳಿ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಶಿವಮೊಗ್ಗದಲ್ಲೂ ಉತ್ತಮ ಮಳೆ : ಜಲಾಶಯಗಳಲ್ಲಿ ಹೆಚ್ಚಿದ ಒಳ ಹರಿವು.
ಶಿವಮೊಗ್ಗ ಜಿಲ್ಲೆಯಲ್ಲೂ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 183.60 ಮಿ.ಮೀ. ಮಳೆಯಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 687.87 ಮಿ.ಮೀ ಇದ್ದು, ಈವರೆಗೆ ಸರಾಸರಿ 532.10 ಮಿ.ಮೀ. ಮಳೆ ದಾಖಲಾಗಿದೆ.
ಶಿವಮೊಗ್ಗ 11.80 ಮಿ.ಮೀ. ಭದ್ರಾವತಿ 7.60 ಮಿ.ಮೀ. ತೀರ್ಥಹಳ್ಳಿ 43.40 ಮಿ.ಮೀ., ಸಾಗರ್ 51.80 ಮಿ.ಮೀ. ಶಿಕಾರಿಪುರ 08.60 ಮಿ. ಮೀ., ಸೊರಬ 13.00 ಮಿ.ಮೀ. ಹಾಗೂ ಹೊಸನಗರ 47.40 ಮಿ.ಮೀ. ಮಳೆಯಾಗಿದೆ. ಉತ್ತಮ ಮಳೆಯಿಂದ ಜಲಾಶಯಗಳಲ್ಲಿ ನೀರಿನ ಒಳಹರಿವು ಸಹ ಹೆಚ್ಚಾಗಿದೆ.