ಚಿಕ್ಕಮಗಳೂರು: ಜಿಲ್ಲೆಯ ಕಳಸ, ಹೊರನಾಡು ಹಾಗೂ ಶೃಂಗೇರಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಕಳಸದಿಂದ ಹೊರನಾಡು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆಬ್ಬಾಳೆ ಸೇತುವೆಯು ಮುಳುಗುವ ಹಂತಕ್ಕೆ ತಲುಪಿದೆ.
ಒಂದು ವೇಳೆ ಹೆಬ್ಬಾಳೆ ಸೇತುವೆ ಮುಳುಗಿದರೆ ಕಳಸ ಮತ್ತು ಹೊರನಾಡು ಪ್ರಮುಖ ಸಂಪರ್ಕ ರಸ್ತೆ ಬಂದ್ ಆಗಲಿದೆ. ನಿರಂತರ ಮಳೆಯ ಕಾರಣ ಜಿಲ್ಲೆಯಲ್ಲಿನ ನದಿಗಳು ಮೈದುಂಬಿ ಹರಿಯುತ್ತಿವೆ. ತುಂಗಾ, ಭದ್ರಾ, ಹೇಮಾವತಿ ನದಿಗಳ ಹರಿವಿನಲ್ಲಿ ಭಾರೀ ಏರಿಕೆ ಕಂಡು ಬರುತ್ತಿದೆ.
ಜಿಲ್ಲೆಯ ಕುದುರೆಮುಖ, ಕಳಸ, ಸಂಸೆ, ಬಾಳೆಹೊಳೆ, ಬಸ್ರೀಕಟ್ಟೆ ಸೇರಿದಂತೆ ವಿವಿಧೆಡೆ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.