ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯಲು ಆರಂಭಿಸಿದೆ. ಜಿಲ್ಲೆಯ ಆಲ್ದೂರು, ಬಾಳೆಹೊನ್ನೂರು, ಕೊಪ್ಪ, ಮೂಡಿಗೆರೆ, ಜಯಪುರ, ಬಣಕಲ್, ಚಾರ್ಮಡಿ ಘಾಟ್ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಕಳೆದ ಒಂದು ಗಂಟೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನರು ಕಂಗಾಲಾಗಿದ್ದಾರೆ. ಗುಡುಗು ಸಹಿತ ಧಾರಾಕಾರ ಮಳೆ ಜೊತೆಗೆ ಜೋರಾಗಿ ಬಿರುಗಾಳಿ ಬೀಸುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಲೆನಾಡು ಭಾಗದ ಹತ್ತಾರು ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಇತ್ತ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನತೆಗೆ ಈ ಮಳೆ ತಂಪನ್ನು ಉಂಟು ಮಾಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಾಫಿ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ.