ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ನಿಡುವಾಳೆ, ಬಾಳೂರು ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು, ಹೆಬ್ಬಾಳ ಸೇತುವೆ ಮುಳುಗಡೆಯಾಗಿದೆ.
ಕಳಸ ಹಾಗೂ ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ ಒಂದು ಅಡಿಯಷ್ಟು ನೀರು ಹರಿಯುತ್ತಿದೆ. ಕಳೆದ ಹಲವು ಬಾರಿ ಹೆಬ್ಬಾಳ ಸೇತುವೆ ಮುಳುಗಿ ಹೊರನಾಡು-ಕಳಸ ಸಂಪರ್ಕ ಕಡಿತವಾಗಿತ್ತು.
ಅಪಾಯ ಮಟ್ಟ ಮೀರಿ ಭದ್ರಾ, ತುಂಗೆ, ಹೇಮಾವತಿ ನದಿಗಳು ಹರಿಯುತ್ತಿವೆ. ಶೃಂಗೇರಿ, ಕೊಪ್ಪ, ಎನ್ಆರ್ ಪುರ ತಾಲೂಕಿನಲ್ಲೂ ಮಳೆಯ ಅಬ್ಬರ ಜೋರಾಗಿದೆ. ಶೃಂಗೇರಿಯಲ್ಲಿ ಸತತ ಮಳೆಯಾಗುತ್ತಿರುವ ಹಿನ್ನೆಲೆ ತುಂಗಾ ನದಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಶೃಂಗೇರಿ ಮಠದ ಗಾಂಧಿ ಮೈದಾನ ಪ್ರವಾಸಿಗರ ಪಾರ್ಕಿಂಗ್ ಸ್ಥಳವಾಗಿದೆ.
ಬಿಟ್ಟು-ಬಿಟ್ಟು ಸುರಿಯುತ್ತಿರೋ ಮಳೆಗೆ ಮಲೆನಾಡಿಗರು ಹೈರಾಣಾಗಿದ್ದಾರೆ. ಶೃಂಗೇರಿ, ಕೆರೆಕಟ್ಟೆ, ಕಿಗ್ಗ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಕೊಟ್ಟಿಗೆಹಾರ, ಬಾಳೂರು, ಚಾರ್ಮಾಡಿ ಘಾಟ್ನಲ್ಲಿ ಕೂಡ ಭಾರೀ ಮಳೆಯಾಗುತ್ತಿದ್ದು, ಸಾರ್ವಜನಿಕರು ಆಂತಕಕ್ಕೀಡಾಗಿದ್ದಾರೆ.